ಮಂಡ್ಯ ಜಿಲ್ಲೆ ಮದ್ದೂರಲ್ಲಿ ಗಣೇಶ ವಿಸರ್ಜನೆಯ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಮದ್ದೂರಿನ ಚನ್ನೇಗೌಡ ಬಡಾವಣೆಯಲ್ಲಿ ಸೆಪ್ಟೆಂಬರ್ 7ರ ರಾತ್ರಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ.
ಗಣೇಶನ ಮೆರವಣಿಗೆ ಮಸೀದಿ ಬಳಿ ಬಂದಾಗ ಯಾವುದೇ ಘೋಷಣೆ ಕೂಗಬಾರದು. ಮೈಕ್ ಹಾಕಬಾರದು ಎಂದು ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಪೊಲೀಸರ ಸೂಚನೆಯಂತೆ ಮೈಕ್ ಆಫ್ ಮಾಡಿ ಮೆರವಣಿಗೆ ಮಾಡಲಾಗುತ್ತಿತ್ತು. ಮೆರವಣಿಗೆ ಮೂಲಕ ಬಂದ ಗಣೇಶ ಮೂರ್ತಿಯ ಮೆರವಣಿಗೆ, ಮಸೀದಿ ಎದುರು ಸಾಗಬೇಕಿತ್ತು.
ಈ ವೇಳೆ ಲೈಟ್‌ಗಳನ್ನ ಆಫ್ ಮಾಡಿ ಕಲ್ಲುಗಳು, ದೊಣ್ಣೆ, ಕಬ್ಬಿಣದ ರಾಡ್‌ಗಳು ತೂರಿ ಬಂದಿವೆ ಎನ್ನಲಾಗಿದೆ. ಘಟನೆಯಲ್ಲಿ ನಾಲ್ವರು ಹೋಮ್‌ಗಾರ್ಡ್‌ಗಳು ಸೇರಿ, 8 ಜನರಿಗೆ ಗಂಭೀರ ಗಾಯಗಳಾಗಿವೆ. ತಕ್ಷಣವೇ ಅಲರ್ಟ್ ಆದ ಪೊಲೀಸರು, ಎಲ್ಲರನ್ನೂ ಚದುರಿಸಿದ್ರು.
ಮದ್ಧೂರಿನಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಇದೆ. ಪಟ್ಟಣದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಘಟನಾ ಸ್ಥಳದಲ್ಲಿ ಎಸ್‌ಪಿ ಮಲ್ಲಿಕಾರ್ಜುನ್ ಮೊಕ್ಕಾಂ ಹೂಡಿದ್ದಾರೆ. ಗಣೇಶ ವಿಸರ್ಜನಾ ಮೆರವಣಿಗೆ ವೇಳೆ, ಮೂವರು ಪಿಎಸ್‌ಐ, 8ರಿಂದ 9 ಕಾನ್ಸ್‌ಟೇಬಲ್ಸ್ ಇದ್ರು. ರಾತ್ರಿ 7ರಿಂದ 10 ಗಂಟೆ ಒಳಗೆ ಕಲ್ಲು ತೂರಾಟ ನಡೆದಿದೆ. ರಾಮ್ ರಹೀಂ ನಗರದ ರಸ್ತೆಯಲ್ಲಿ ಮಸೀದಿ ಇದೆ. ಎರಡೂ ಕಡೆಯಿಂದ ಕಲ್ಲು ತೂರಾಟ ನಡೆದಿದೆಯಂತೆ. ಬಳಿಕ ಎಲ್ಲರನ್ನು ಚದುರಿಸಿ ಗಣೇಶ ವಿಸರ್ಜನೆ ಮಾಡಿ ಕಳಿಸಿದ್ದಾರೆ. ಹೆಚ್ಚಿನ ತನಿಖೆ ನಡೀತಿದೆ ಅಂತಾ, ಎಸ್‌ಪಿ ಹೇಳಿದ್ದಾರೆ.
ಈಗಾಗಲೇ ಘಟನೆ ಸಂಬಂಧ 2 ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಪೊಲೀಸರು ಸುಮೊಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಗಾಯಾಳು ಅಜಯ್ ಎಂಬಾತ ದೂರು ಹಿನ್ನೆಲೆ ಮತ್ತೊಂದು ಪ್ರಕರಣದ ದಾಖಲು ಮಾಡಲಾಗಿದೆ.
ಇಲ್ಲಿಯವರೆಗೆ 21 ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಕೆಲವರ ಕೈವಾಡ ಇದ್ದು, ಕಿಡಿಗೇಡಿಗಳನ್ನು ಗುರುತಿಸುವ ಪ್ರಕ್ರಿಯೆ ನಡೆಸಲಾಗ್ತಿದೆ. ಇಬ್ಬರು ಆರೋಪಿಗಳು ಚನ್ನಪಟ್ಟಣದವರು. ಉಳಿದ ಎಲ್ಲರೂ ಸ್ಥಳೀಯರು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. 6 ಕೆಎಸ್‌ಆರ್‌ಪಿ ಸೇರಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಹೀಗಂತ ಎಸ್‌ಪಿ ಮಲ್ಲಿಕಾರ್ಜುನ್ ಸ್ಪಷ್ಟನೆ ಕೊಟ್ಟಿದ್ದಾರೆ.