ಮಂಡ್ಯ: ಮಂಡ್ಯ ಮದ್ದೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮದ್ದೂರು ಸಂಚಾರಿ ಪೊಲೀಸ್ ಠಾಣಾ ಸಿಬ್ಬಂದಿಗೆ ಸೋಂಕು ತಾಗಿರುವುದು ಧೃಡವಾಗಿದೆ.

ಇನ್ನು ಮದ್ದೂರು ಪಟ್ಟಣದ ಪೋಲೀಸ್ ಠಾಣೆ ಮತ್ತು ಸಂಚಾರಿ ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲು ಎಸ್ಪಿ ಕೆ.ಪರಶುರಾಂ ಆದೇಶ ನೀಡಿದ್ದಾರೆ. ಈ ಎರಡು ಪೊಲೀಸ್ ಠಾಣೆ ಸಿಬ್ಬಂದಿಗಳು ನಾಳೆಯಿಂದ ಬೇರೆ ಕಡೆ ಕೆಲಸ ನಿರ್ವಹಿಸಲಿದ್ದಾರೆ.
ಈ ಪೊಲೀಸ್ ಸಿಬ್ಬಂದಿ, ಮದ್ದೂರಿನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮದ್ದೂರು ನ್ಯಾಯಾಲಯದ ನ್ಯಾಯಾಧೀಶರು ಪೋಲೀಸ್ ಸಿಬ್ಬಂದಿ ಸಂಪರ್ಕದಲ್ಲಿದ್ದರು. ಈಗ ಪೋಲೀಸ್ ಸಿಬ್ಬಂದಿಗೆ ಸೋಂಕು ಧೃಡದಿಂದ ನ್ಯಾಯಾಧೀಶರಿಗೆ ಆತಂಕ ಶುರುವಾಗಿದೆ.
ಇನ್ನೊಂದೆಡೆ ಮದ್ದೂರು ತಾಲೂಕಿನ 7 ಜನರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ನಿನ್ನೆ ರಾತ್ರಿಯೇ ಮದ್ದೂರು ಪಟ್ಟಣದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಪೊಲೀಸರು ಸೀಲ್‌ಡೌನ್ ಮಾಡಿಸಿದ್ದಾರೆ. ಅಲ್ಲದೇ, ರಾತ್ರಿಯೇ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಮದ್ದೂರು ಲೀಲಾವತಿ ಬಡಾವಣೆ ಸೇರಿ ಪಟ್ಟಣದ ಪಕ್ಕದ ಕೂಳಗೆರೆ, ಹಾಗಲಹಳ್ಳಿ ಸೀಲ್ಡೌನ್‌ಗೆ ಚಿಂತನೆ ನಡೆಸಲಾಗಿದೆ. ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್‌ನಲ್ಲಿ ಅಧಿಕೃತವಾಗಿ ವರದಿ ಪ್ರಕಟವಾಗಲಿದ್ದು, ಸದ್ಯ ಮದ್ದೂರು ಪಟ್ಟಣದ ಜನ ಆತಂಕದಲ್ಲಿದ್ದಾರೆ.
ಪ್ರವೀಣ್ ಕುಮಾರ್ ಜಿ.ಟಿ, ಕರ್ನಾಟಕ ಟಿವಿ, ಮಂಡ್ಯ
