ಸಿದ್ದರಾಮಯ್ಯ ಸಂಪುಟದಿಂದ ಕೆ.ಎನ್ ರಾಜಣ್ಣ ಅವರನ್ನ ಕಿತ್ತು ಹಾಕಿದ್ದಕ್ಕೆ ಬೆಂಬಲಿಗರು ಕೆರಳಿ ಕೆಂಡವಾಗಿದ್ದಾರೆ. ಹೈಕಮಾಂಡ್ ದಿಢೀರ್ ಕ್ರಮ, ಕಾಂಗ್ರೆಸ್ ಪಾಳಯದಲ್ಲಿ ಅಲ್ಲೋಲ, ಕಲ್ಲೋಲ ಸೃಷ್ಟಿಸಿದೆ. ಮಧುಗಿರಿಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಬೀದಿಗಿಳಿದು, ಹೋರಾಟಕ್ಕೆ ಮುಂದಾಗಿದ್ದಾರೆ.
ಮಧುಗಿರಿ ನಗರದಲ್ಲಿ ರಾಜಣ್ಣ ಬೆಂಬಲಿಗರು, ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು, ಅನ್ಯಾಯ ಅಂತಾ ಘೋಷಣೆ ಕೂಗುತ್ತಾ, ಬಸ್‌ಗಳನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಬೆಂಬಲಿಗನೊಬ್ಬ ಆಕ್ರೋಶಗೊಂಡು, ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಅಲ್ಲೇ ಇದ್ದ ಕೆಲವರು, ಪೆಟ್ರೋಲ್ ಸುರಿದುಕೊಂಡವರ ಮೇಲೆ ನೀರು ಸುರಿದಿದ್ದಾರೆ. ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದು, ಬೆಂಬಲಿಗರ ದೊಡ್ಡ ಹೈಡ್ರಾಮವೇ ನಡೆದಿದೆ. ನಮಗೆ ನ್ಯಾಯ ಬೇಕು. ಅವರೇನು ತಪ್ಪು ಮಾಡಿದ್ದಾರೆ. ಉತ್ತರ ಕೊಡಲೇಬೇಕು. ಪಿತೂರಿ, ಚಾಡಿ ಮಾತಿನಿಂದ ಅನ್ಯಾಯವಾಗಿದೆ ಅಂತಾ ಆಕ್ರೋಶ ಹೊರಹಾಕಿದ್ದಾರೆ.
ರಾಜಣ್ಣ ತಲೆದಂಡ ನಿರ್ಧಾರ, ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆ ಮೇಲೂ ತೀವ್ರ ಪರಿಣಾಮ ಬೀರಿದೆ. ತುಮಕೂರಲ್ಲಿ ಈಗಾಗಲೇ ರಾಜೀನಾಮೆ ಪರ್ವ ಶುರುವಾಗಿದೆ. ರಾಜಣ್ಣ ರಾಜೀನಾಮೆ ನೀಡುತ್ತಿದ್ದಂತೆ, ಮಧುಗಿರಿ ಪುರಸಭೆಯ ಮಹಿಳಾ ಸದಸ್ಯೆಯೊಬ್ಬರು, ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. 10ನೇ ವಾರ್ಡಿನ ಸದಸ್ಯೆ ಗಿರಿಜಾ ಮಂಜುನಾಥ್ ರಾಜೀನಾಮೆ ನೀಡಿದ್ದು, ರಾಜೀನಾಮೆ ಪತ್ರದಲ್ಲಿ ಸ್ವಇಚ್ಛೆ ಅಂತಾ ಉಲ್ಲೇಖಿಸಿದ್ದಾರೆ. ರಾಜಣ್ಣ ಅವರನ್ನ ವಜಾ ಮಾಡಿದಂತೆ ನಮ್ಮನ್ನು ವಜಾ ಮಾಡುವಂತೆ ಮನವಿ ಮಾಡುತ್ತಿದ್ದಾರೆ.
ಗಿರಿಜಾ ಮಂಜುನಾಥ್ ಮಾತ್ರವಲ್ಲ.. ಮಧುಗಿರಿ ಪುರಸಭೆಯ 13 ಸದಸ್ಯರು ರಾಜೀನಾಮೆಗೆ ನಿರ್ಧಾರ ಮಾಡಿದ್ದಾರಂತೆ. ಅಧ್ಯಕ್ಷರು, ಉಪಾಧ್ಯಕ್ಷರು ಕೂಡ ರಾಜೀನಾಮೆಗೆ ಮುಂದಾಗಿದ್ದಾರೆ. ಈ ಬಗ್ಗೆ ಪುರಸಭೆ ಉಪಾಧ್ಯಕ್ಷೆ ಸುಜಾತಾ, ರಾಜ್ಯ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ರಾಜಣ್ಣ ಆಡಿದ ಮಾತು ಅವರ ಸಚಿವ ಸ್ಥಾನಕ್ಕೆ ಮುಳುವಾಗಿದೆ. ಇದೀಗ ರಾಜಣ್ಣ ಬೆಂಬಲಿಗರ ನಡೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ತಲೆ ನೋವಾಗಿದೆ.