ಅರೆ–ಬಂಜರು ಪ್ರದೇಶವನ್ನು ರಾಷ್ಟ್ರಮಟ್ಟದ ಮಾದರಿಯನ್ನಾಗಿ ಪರಿವರ್ತಿಸಿ, ನೀರಿನ ಸಂರಕ್ಷಣೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆ ‘ದೇಶದ ಅತ್ಯುತ್ತಮ ಪ್ರದರ್ಶನ ನೀಡಿದ ಜಿಲ್ಲೆ’ ಎಂಬ ಪ್ರಶಸ್ತಿ ಪಡೆದಿದೆ. ಈ ಯೋಜನೆಯನ್ನು ಮುನ್ನಡೆಸಿದ ಕರ್ನಾಟಕದ ತಿಪಟೂರಿನ ಮೂಲದ IAS ಅಧಿಕಾರಿ ಡಾ. ನಾಗಾರ್ಜುನ್ ಬಿ. ಗೌಡ ಹಾಗೂ ಖಾಂಡ್ವಾ ಕಲೆಕ್ಟರ್ ರಿಷವ್ ಗುಪ್ತಾ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ಸನ್ಮಾನಿಸಿದರು. ಜೊತೆಗೆ 2 ಕೋಟಿ ರೂ. ನಗದು ಪ್ರಶಸ್ತಿ ನೀಡಲಾಯಿತು.
ತುಮಕೂರು ಜಿಲ್ಲೆಯ ತಿಪಟೂರಿನವರಾದ ಡಾ. ನಾಗಾರ್ಜುನ್ ಗೌಡ, ಸದ್ಯ ಖಾಂಡ್ವಾ ಜಿಲ್ಲಾ ಪಂಚಾಯತ್ CEO ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಳೆನೀರು ಕೊಯ್ಲು ಮತ್ತು ಗ್ರೌಂಡ್‌ವಾಟರ್ ಪುನರ್ಭರ್ತಿ ಯೋಜನೆಗಳನ್ನು ಭೂಮಟ್ಟದಲ್ಲಿ ಜಾರಿಗೊಳಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ.
ಸನ್ಮಾನದ ನಂತರ ಮಾತನಾಡಿದ ಅವರು ತಮ್ಮ ಬಾಲ್ಯದ ಕಷ್ಟಗಳನ್ನು ನೆನಪಿಸಿಕೊಂಡರು. ತಿಪಟೂರು ಬರಪೀಡಿತ ಪ್ರದೇಶ. ನನ್ನ ಪೋಷಕರು ಇಬ್ಬರೂ ಶಿಕ್ಷಕರು. ಆದರೆ ನಮ್ಮ ಸುತ್ತಲಿನ ಎಲ್ಲರ ಜೀವನ ನೀರಿನ ಕೊರತೆಯಿಂದ ಹೋರಾಟವಾಗಿತ್ತು. ಫಲ ಕೊಡದ ಬೋರ್‌ವೆಲ್‌ಗಳಿಂದ ಕೆಲ ಬಕೆಟ್ ನೀರನ್ನು ತರುವುದಕ್ಕಾಗಿ ಮೈಲಿಗಟ್ಟಲೆ ಸೈಕಲ್ ತುಳಿದು ಹೋಗುತ್ತಿದ್ದ ನೆನಪು ಇಂದೂ ಮರೆಯಾಗಿಲ್ಲ.
ಕೆಲವೊಮ್ಮೆ ಆ ಬೋರ್‌ವೆಲ್ ಅನ್ನು 10 ನಿಮಿಷ ಒತ್ತಿದ ಮೇಲೆ ಮಾತ್ರ ನೀರು ಬರುತ್ತಿತ್ತು. ಹಾಗಾಗಿ ‘ಜಲ್ ಸಂಚಯ್, ಜನ್ ಭಾಗೀದಾರಿ’ ಯೋಜನೆಯನ್ನು ಪ್ರಾರಂಭಿಸಿದಾಗ, ಅದು ವೈಯಕ್ತಿಕವಾಗಿ ನನಗೆ ಖುಷಿ ನೀಡಿತು ಎಂದು ಅವರು ಹೇಳಿದರು. ತುಮಕೂರಿನ ಉತ್ತರಕ್ಕೆ ಚಿತ್ರದುರ್ಗವಿದೆ. ಇದು ಕರ್ನಾಟಕದ ಅತ್ಯಂತ ಶುಷ್ಕ ಪ್ರದೇಶಗಳಲ್ಲಿ ಒಂದಾಗಿದೆ. ಇದು ದಶಕಗಳಿಂದ ಬರಗಾಲಕ್ಕೆ ತುತ್ತಾಗಿತ್ತು
ಇದರ ನಂತರ ಮಂಡ್ಯದ ವೈದ್ಯಕೀಯ ಕಾಲೇಜಿನಲ್ಲಿ ಎದುರಿಸಿದ ನೀರಿನ ಬಿಕ್ಕಟ್ಟೂ ಅವರ ಮೇಲೆ ಆಳವಾದ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ. ಡಿಸಿ ರಿಷವ್ ಗುಪ್ತಾ ಅವರ ನೇತೃತ್ವ ಮತ್ತು ಡಾ. ನಾಗಾರ್ಜುನ್ ಗೌಡ ಅವರ ಸಮನ್ವಯದಲ್ಲಿ ಖಾಂಡ್ವಾ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಜನಚಳುವಳಿ ರೂಪಿಸಲಾಯಿತು. ಅಧಿಕಾರಿಗಳಿಂದ ಹಿಡಿದು ಗ್ರಾಮಸ್ಥರ ತನಕ ಎಲ್ಲರೂ ನೇರವಾಗಿ ಪಾಲ್ಗೊಂಡರು. ಇದರ ಪರಿಣಾಮವಾಗಿ ನೀರಿನ ಸೌಲಭ್ಯ ದೊರತಿದೆ.
ಗ್ರಾಮ ಲೆಕ್ಕಾಧಿಕಾರಿಗಳಿಂದ ಜಿಲ್ಲಾಧಿಕಾರಿಯವರೆಗೆ ಅಧಿಕಾರಿಗಳು ಹಳ್ಳಿಯಿಂದ ಹಳ್ಳಿಗೆ ತೆರಳಿ ನಿವಾಸಿಗಳು, ರೈತರು, ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳು ಮಳೆನೀರು ಕೊಯ್ಲು ಅಳವಡಿಸಿಕೊಳ್ಳುವಂತೆ ಒತ್ತಾಯಿಸಿದರು. ಅದರ ಫಲಿತಾಂಶವಾಗಿ 40,00 ನೀರು ಕೊಯ್ಲು ವ್ಯವಸ್ಥೆಗಳು, ಕೆರೆ ಪುನರ್ಭರ್ತಿ ಸೇರಿದಂತೆ 1,29,000 ಕ್ಕೂ ಹೆಚ್ಚು ಸ್ಥಾಪನೆಗಳು ಖಾಂಡ್ವಾವನ್ನು ಮಳೆನೀರು-ಸಕಾರಾತ್ಮಕ ಜಿಲ್ಲೆಯನ್ನಾಗಿ ಪರಿವರ್ತಿಸಿವೆ.
ವರದಿ : ಲಾವಣ್ಯ ಅನಿಗೋಳ

