Friday, July 18, 2025

Latest Posts

ನಕಲಿ SC ಸರ್ಟಿಫಿಕೇಟ್​​ ಪಡೆದವರ ವಿರುದ್ಧ ಕಠಿಣ ಕ್ರಮ : ಜಾತಿ ಪ್ರಮಾಣ ಪತ್ರಗಳ ದುರ್ಬಳಕೆಯ ವಿರುದ್ಧ ಫಡ್ನವೀಸ್ ಸಮರ

- Advertisement -

ಮುಂಬೈ : ಹಿಂದೂ ಧರ್ಮ, ಬೌದ್ಧ ಧರ್ಮ ಅಥವಾ ಸಿಖ್ ಧರ್ಮವನ್ನು ಹೊರತುಪಡಿಸಿ ಬೇರೆ ಧರ್ಮಕ್ಕೆ ಸೇರಿದ ವ್ಯಕ್ತಿಯು ವಂಚನೆಯಿಂದ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಪಡೆದಿದ್ದರೆ, ಅದನ್ನು ರದ್ದುಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ವಂಚನೆಯ ಮೂಲಕ ಸರ್ಕಾರಿ ಉದ್ಯೋಗಗಳಂತಹ ಮೀಸಲಾತಿ ಸೌಲಭ್ಯಗಳನ್ನು ಪಡೆದಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ವಿಧಾನಪರಿಷತ್ತಿನಲ್ಲಿ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ಸರ್ಕಾರ ಇಂತಹ ದುರ್ಬಳಕೆಯನ್ನು ಸಹಿಸಿಕೊಳ್ಳುವುದಿಲ್ಲ. ಯಾರೇ ಆಗಲಿ ವಂಚನೆಯಿಂದ ಪಡೆದ ಎಸ್‌ಸಿ ಪ್ರಮಾಣಪತ್ರವನ್ನು ಬಳಸಿಕೊಂಡು ಚುನಾವಣೆಯಲ್ಲಿ ಗೆದ್ದಿದ್ದರೆ, ಅವರ ಆಯ್ಕೆಯನ್ನು ಅಮಾನ್ಯವೆಂದು ಘೋಷಿಸಲಾಗುತ್ತದೆ ಎಂದು ಫಡ್ನವೀಸ್ ತಿಳಿಸಿದ್ದಾರೆ.

ಒತ್ತಾಯಪೂರ್ವಕವಾಗಿ ಹಾಗೂ ವಂಚನೆಯ ಮೂಲಕ ಧಾರ್ಮಿಕ ಮತಾಂತರದ ಪ್ರಕರಣಗಳನ್ನು ಎದುರಿಸಲು ರಾಜ್ಯ ಸರ್ಕಾರವು ಬಿಗಿಯಾದ ನಿಬಂಧನೆಗಳನ್ನು ತರಲು ಉದ್ದೇಶಿಸಿದೆ. ಬಿಜೆಪಿಯ ಅಮಿತ್ ಗೋರ್ಖೆ ಅವರು ಕ್ರಿಪ್ಟೋ ಕ್ರಿಶ್ಚಿಯನ್ನರು ಧಾರ್ಮಿಕ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಕೆಲವು ಜನರು ಇತರ ಧರ್ಮಗಳನ್ನು ಪ್ರತಿಪಾದಿಸುತ್ತಿದ್ದರೂ, ಅವರು ಎಸ್‌ಸಿ ವರ್ಗದ ಅಡಿಯಲ್ಲಿ ಮೀಸಲಾತಿಯಿಂದ ಪ್ರಯೋಜನ ಪಡೆಯುತ್ತಾರೆ ಎಂದು ಆರೋಪಿಸಿದ್ದರು. ಕ್ರಿಪ್ಟೋ ಕ್ರಿಶ್ಚಿಯನ್ನರು ಎಂಬುದು ದಾಖಲೆಗಳ ಮೂಲಕ ಬೇರೆ ಧರ್ಮಕ್ಕೆ ಸೇರಿದವರಾಗಿ ಕ್ರಿಶ್ಚಿಯನ್ ಧರ್ಮವನ್ನು ವಿವೇಚನೆಯಿಂದ ಅನುಸರಿಸುವ ಜನರಿಗೆ ಸ್ಪಷ್ಟ ಅನ್ವಯವಾಗುತ್ತದೆ ಎಂದು ಹೇಳಿದ್ದರು.

ಮೇಲ್ನೋಟಕ್ಕೆ ಅವರು ಎಸ್‌ಸಿ ಸಮುದಾಯಕ್ಕೆ ಸೇರಿದವರಾಗಿದ್ದು, ಸರ್ಕಾರಿ ಉದ್ಯೋಗಗಳಂತಹ ಮೀಸಲಾತಿ ಸೌಲಭ್ಯಗಳನ್ನು ಪಡೆಯುತ್ತಾರೆ ಎಂದು ಗೋರ್ಖೆ ಹೇಳಿದ್ದರು. ನವೆಂಬರ್ 26, 2024 ರಂದು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನಲ್ಲಿ, ಪರಿಶಿಷ್ಟ ಜಾತಿ ವರ್ಗದ ಮೀಸಲಾತಿಯನ್ನು ಹಿಂದೂಗಳು, ಬೌದ್ಧರು ಮತ್ತು ಸಿಖ್ಖರು ಮಾತ್ರ ಪಡೆಯಬಹುದು, ಆದರೆ ಇತರ ಧರ್ಮಗಳಿಗೆ ಸೇರಿದವರು ಅಲ್ಲ ಅಂತ ಸ್ಪಷ್ಟಪಡಿಸಿದೆ ಎಂದು ಫಡ್ನವೀಸ್ ಸದಸ್ಯರ ಗಮನಕ್ಕೆ ತಂದಿದ್ದಾರೆ.

ಪ್ರಮುಖವಾಗಿ ಹಿಂದೂ, ಬೌದ್ಧ ಮತ್ತು ಸಿಖ್ ಧರ್ಮವನ್ನು ಹೊರತುಪಡಿಸಿ ಅನ್ಯ ಧರ್ಮಗಳ ಯಾರಾದರೂ ಎಸ್‌ಸಿ ಪ್ರಮಾಣಪತ್ರ ಅಥವಾ ಮೀಸಲಾತಿ ಪಡೆದಿದ್ದರೆ, ಅವರ ಸಿಂಧುತ್ವ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರಗಳನ್ನು ಸೂಕ್ತ ಕಾರ್ಯವಿಧಾನದೊಂದಿಗೆ ರದ್ದುಗೊಳಿಸಲಾಗುತ್ತದೆ. ಯಾರಾದರೂ ಸರ್ಕಾರಿ ಉದ್ಯೋಗಗಳಂತಹ ಪ್ರಯೋಜನಗಳನ್ನು ಪಡೆದಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಫಡ್ನವೀಸ್ ಎಚ್ಚರಿಸಿದ್ದಾರೆ.

ಹೀಗೆ ವಂಚನೆಯಿಂದ ಪಡೆದ ಜಾತಿ ಪ್ರಮಾಣಪತ್ರಗಳನ್ನು ಬಳಸಿಕೊಂಡು ಲಾಭ ಪಡೆದವರಿಂದ ಹಣಕಾಸಿನ ದಂಡದ ರೂಪದಲ್ಲಿ ಹಣ ಮರುಪಡೆಯಲು ಶಿಫಾರಸು ಮಾಡಲಾಗುತ್ತದೆ. ಇನ್ನೂ ತಮ್ಮ ಧರ್ಮವನ್ನು ಮರೆಮಾಡಿ ಮಹಿಳೆಯರನ್ನು ಮದುವೆಯಾಗಿ ವಂಚಿಸಿದ ಪ್ರಕರಣಗಳು ನಡೆದಿವೆ ಎಂದು ಬಿಜೆಪಿ ನಾಯಕಿ ಚಿತ್ರ ವಾಘ್‌ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಸಾಂಗ್ಲಿ ಜಿಲ್ಲೆಯಲ್ಲಿ ರಹಸ್ಯವಾಗಿ ಕ್ರಿಶ್ಚಿಯನ್‌ ಧರ್ಮವನ್ನು ಪ್ರತಿಪಾದಿಸುವ ಕುಟುಂಬವನ್ನು ಮಹಿಳೆಯೊಬ್ಬರು ಮದುವೆಯಾದ ಪ್ರಕರಣದ ಬಗ್ಗೆ ಅವರು ಉಲ್ಲೇಖಿಸಿದರು. ಮಹಿಳೆ ಚಿತ್ರಹಿಂಸೆ ಅನುಭವಿಸಿದಳು ಮತ್ತು ಬಲವಂತವಾಗಿ ತನ್ನ ಧರ್ಮವನ್ನು ಬದಲಾಯಿಸಲಾಯಿತು, ಇದು ಏಳು ತಿಂಗಳ ಗರ್ಭಿಣಿಯಾಗಿದ್ದಾಗ ಆಕೆಯ ಸಾವಿಗೆ ಕಾರಣವಾಯಿತು ಎಂದು ವಾಘ್‌ ಮತಾಂತರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಒಬ್ಬ ವ್ಯಕ್ತಿಯು ಯಾವುದೇ ಧರ್ಮವನ್ನು ಅನುಸರಿಸಬಹುದು ಮತ್ತು ಒಪ್ಪಿಗೆಯೊಂದಿಗೆ ಇನ್ನೊಬ್ಬ ವ್ಯಕ್ತಿಯನ್ನು ಮತಾಂತರಿಸಬಹುದು, ಆದರೆ ಕಾನೂನು ಬಲವಂತದ ಬಳಕೆ, ವಂಚನೆ ಅಥವಾ ಮತಾಂತರಕ್ಕಾಗಿ ಆಮಿಷ ಒಡ್ಡಲು ಅನುಮತಿಸುವುದಿಲ್ಲ ಎಂದು ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

- Advertisement -

Latest Posts

Don't Miss