Devotional:
ಧರ್ಮ ಸಂಸ್ಥಾಪನೆಗಾಗಿ ಶ್ರೀಮನ್ನಾರಾಯಣ ತಾಳಿದ ದಶಾವತಾರಗಳ ಪೈಕಿ ಐದನೇ ಅವತಾರವೇ ವಾಮನ ಅವತಾರ. ಬಲಿ ಚಕ್ರವರ್ತಿಯ ಅಹಂಕಾರವನ್ನು ದಮನ ಮಾಡಲು ಮಹಾವಿಷ್ಣು ಈ ಅವತಾರ ತಾಳಿದ ಎಂದು ಪುರಾಣ ಹೇಳುತ್ತದೆ. ಪುರಾಣಗಳ ಪ್ರಕಾರ, ಭಾದ್ರಪದ ಶುದ್ಧ ದ್ವಾದಶಿಯಂದು ಮಧ್ಯಾಹ್ನದ ಕಾಲದಲ್ಲಿ ವಿಷ್ಣು ವಾಮನ ಅವತಾರ ತಾಳಿದ ಎಂದು ಉಲ್ಲೇಖವಿದೆ.
ವಾಮನಾವತಾರವನ್ನು ಪುರಾಣಗಳಲ್ಲಿ ವಿಷ್ಣುವಿನ ಐದನೆಯ ಅವತಾರವೆಂದು ಪರಿಗಣಿಸಲಾಗಿದೆ, ಮತ್ತು ಎರಡನೇ ಯುಗ ಅಥವಾ ತ್ರೇತಾಯುಗದ ಮೊದಲ ಅವತಾರವೆಂದು ಹೇಳಲಾಗಿದೆ. ವಿಷ್ಣುವು ಮಾನವರೂಪಿ ಲಕ್ಷಣಗಳಿಲ್ಲದೆ ಕಾಣಿಸಿಕೊಂಡ ಮೊದಲ ಅವತಾರ, ಕುಬ್ಜಬ್ರಾಹ್ಮಣನಾಗಿ ಕಾಣಿಸಿಕೊಳ್ಳುತ್ತಾನೆ. ಇವನು ಉಪೇಂದ್ರ, ಮತ್ತು ತ್ರಿವಿಕ್ರಮನೆಂದೂ ಪರಿಚಿತನಾಗಿದ್ದಾನೆ.
ಪ್ರಹ್ಲಾದನಿಗೂ ಹಾಗೂ ವಾಮನ ಅವತಾರಕ್ಕೂ ಒಂದು ವಿಶೇಷವಾದ ನಂಟಿದೆ ಎಂಬ ಉಲ್ಲೇಖವಿದೆ,ಹಾಗೆಯೆ ಮಹಾವಿಷ್ಣುವಿನ ದಶಾವತಾರಗಳಲ್ಲಿ ಒಂದಕ್ಕೊಂದು ನಂಟಿದೆ ಎನ್ನಲಾಗಿದೆ. ನರಸಿಂಹ ಅವತಾರದಲ್ಲಿ ವಿಷ್ಣುಭಕ್ತನಾಗಿದ್ದ ಪ್ರಹ್ಲಾದನಿಗೂ ವಾಮನ ಅವತಾರಕ್ಕೂ ವಿಶೇಷ ನಂಟಿದೆ. ಮಹಾವಿಷ್ಣು ನರಸಿಂಹನ ಅವತಾರ ತಾಳಿದ್ದೇ ತನ್ನ ಅಪ್ರತಿಮ ಭಕ್ತನಾಗಿದ್ದ ಪ್ರಹ್ಲಾದನಿಗಾಗಿ. ಪ್ರಹ್ಲಾದನ ತಂದೆ ಹಿರಣ್ಯಕಶಿಪುವಿನ ವಧೆಗಾಗಿ. ಅಂತೆಯೇ, ಮಹಾವಿಷ್ಣು ವಾಮನನ ಅವತಾರ ತಾಳಿದ್ದು ರಾಕ್ಷಸರ ರಾಜ ,ಹಿರಣ್ಯಕಶಿಪುವಿನ ಮಗನಾಗಿದ್ದ ಪ್ರಹ್ಲಾದನ ಮೊಮ್ಮಗ ಬಲಿಚಕ್ರವರ್ತಿಗಾಗಿ ,ಬಲಿ ಚಕ್ರವರ್ತಿ ದಾನ ನೀಡುವುದರಲ್ಲಿ ಪ್ರಸಿದ್ಧಿ ಪಡೆದಿದ್ದ. ಬಲಿ ಚಕ್ರವರ್ತಿಯ ರಾಜ್ಯವೂ ಸಹ ಸುಭಿಕ್ಷವಾಗಿತ್ತು. ಬಲಿಯು ತುಂಬ ಶಕ್ತಿವಂತನಾಗಿದ್ದ, ಎಲ್ಲ ಗ್ರಹಗಳನ್ನೂ ತನ್ನ ಅದೀನದಲ್ಲಿಟ್ಟು ಕೊಂಡಿದ್ದ ಇದನ್ನು ಕಂಡ ದೇವತೆಗಳು ಭಯಬೀತರಾಗಿದ್ದರು. ನಂತರ ವಿಷ್ಣುವಿನ ಬಳಿ ಹೋಗಿ ತಮ್ಮಗೆ ಆಗುತ್ತಿರುವ ಕಷ್ಟವನ್ನು ಕೇಳಿಕೊಂಡರು. ಆಗ ವಿಷ್ಣುವು ಕಶ್ಯಪ ಋಷಿ ಮತ್ತು ಅದಿತಿ ದಂಪತಿಯ ಪುತ್ರ ವಾಮನನಾಗಿ ಅವತಾರ ತಾಳಿದ.
ಒಮ್ಮೆ ಬಲಿ ಚಕ್ರವರ್ತಿಗೆ ಅಶ್ವಮೇಧ ಯಾಗ ಮಾಡಬೇಕೆಂಬ ಯೋಚನೆ ಹುಟ್ಟಿತು. ಈ ಯಾಗ ಮಾಡುವಾಗ ಯಾರೇ ಬರಲಿ, ಬಂದವರೆಲ್ಲರಿಗೂ ಅವರು ಕೇಳಿದ ವಸ್ತುಗಳನ್ನು ದಾನವಾಗಿ ಕೊಡಬೇಕೆಂಬ ನಿರ್ಧಾರವನ್ನು ಸಹ ಕೈಗೊಂಡ. ಇದೇ ಬಲಿಚಕ್ರವರ್ತಿಯನ್ನು ಸಂಹಾರ ಮಾಡಲು ತಕ್ಕ ಸಮಯವೆಂದು ಭಾವಿಸಿದ ವಿಷ್ಣುವು, ವಾಮನ ರೂಪಿಯಾಗಿ ಯಾಗ ನಡೆಯುವ ಸ್ಥಳಕ್ಕೆ ಬಂದು. ತನಗೆ ಮೂರು ಹೆಜ್ಜೆಗಳಷ್ಟು ಭೂಮಿಯನ್ನು ದಾನವಾಗಿ ನೀಡಬೇಕೆಂದು ಕೇಳಿಕೊಂಡನು. ದಾನ ನೀಡುವ ಮೊದಲು ಸಂಪ್ರೋಕ್ಷಣೆ ಬಿಡುವ ಪದ್ಧತಿಯಿದೆ. ಅಂದರೆ ತಮ್ಮ ಕಮಂಡಲದಲ್ಲಿ ನೀರನ್ನು ತೆಗೆದುಕೊಂಡು ಅದನ್ನು ದಾನ ಕೊಡುವವರ ಕೈಗೆ ಹಾಕೋದು. ಈ ಸಮಯದಲ್ಲಿ ರಾಕ್ಷಸರ ಗುರುವಾಗಿದ್ದ ಶುಕ್ರಾಚಾರ್ಯರು ಬಲಿ ಚಕ್ರವರ್ತಿಯನ್ನು ಇದರಿಂದ ತಪ್ಪಿಸುವ ಸಲುವಾಗಿ ಕಮಂಡಲದ ರಂಧ್ರದಲ್ಲಿ ಸೇರಿಕೊಳ್ತಾರೆ. ಹಾಗಾಗಿ ಸಂಪ್ರೋಕ್ಷಣೆ ಮಾಡಬೇಕಾದರೆ ನೀರು ಬೀಳುತ್ತಿರಲಿಲ್ಲ.
ಆಗ, ಶುಕ್ರಾಚಾರ್ಯರ ಬುದ್ಧಿಯನ್ನು ಅರಿತವಿಷ್ಣುವು ಕಮಂಡಲದಲ್ಲಿ ಏನೋ ಕಸ ಸಿಕ್ಕಿಕೊಂಡಂತಿದೆ. ಅದನ್ನು ತೆಗೆಯುತ್ತೇನೆ ಎಂದು ಹೇಳಿ ಕಮಂಡಲದ ನಾಳಕ್ಕೆ ದರ್ಬೆಯೊಂದನ್ನು ಚುಚ್ಚಿದ. ಹಾಗ ದರ್ಬೆಯು ಶುಕ್ರಾಚಾರ್ಯರ ಕಣ್ಣನ್ನು ಚುಚ್ಚಿತು. ಹೀಗಾಗಿ ಶುಕ್ರಾಚಾರ್ಯರು ತಮ್ಮ ಒಂದು ಕಣ್ಣನ್ನು ಕಳೆದುಕೊಂಡರು. ದಾನ ಪಡೆಯಲು ವಾಮನನಾದ ತ್ರಿವಿಕ್ರಮ ನಂತರ ಸಂಪ್ರೋಕ್ಷಣೆ ಸರಾಗವಾಗಿ ನೆರವೇರಿತು. ಮುಂದೆ ಬಲಿ ಚಕ್ರವರ್ತಿ ದಾನ ನೀಡಲು ಮುಂದಾದಾಗ ವಾಮನ ತ್ರಿವಿಕ್ರಮನಾಗಿ ಬೆಳೆದ. ತ್ರಿವಿಕ್ರಮ ಎಂದರೆ ಅಗಲವಾದ ಪಾದಗಳುಳ್ಳವನು ಎಂದರ್ಥ. ತ್ರಿವಿಕ್ರಮನಾಗಿ ಬೆಳೆದ ವಾಮನನ ಮೊದಲನೇ ಹೆಜ್ಜೆ ಇಡೀ ಭೂಮಿಯನ್ನು ಆವರಿಸಿತು. ನಂತರ ತನ್ನ ಎರಡನೇ ಹೆಜ್ಜೆಯನ್ನು ಆಕಾಶದ ಮೇಲಿಟ್ಟನು. ಇಡೀ ಆಕಾಶವನ್ನು ಆಕ್ರಮಿಸಿದನು, ಬಳಿಕ, ಮೂರನೇ ಹೆಜ್ಜೆ ಎಲ್ಲಿಡಬೇಕೆಂದು ಚಕ್ರವರ್ತಿಯನ್ನು ಕೇಳಿದಾಗ, ತನ್ನ ತಲೆಯ ಮೇಲಿಡುವಂತೆ ಕೇಳಿಕೊಂಡನು. ಮೂರನೇ ಹೆಜ್ಜೆಯನ್ನು ಬಲಿಯ ತಲೆಯ ಮೇಲಿಟ್ಟು ಬಲಿ ಚಕ್ರವರ್ತಿಯನ್ನು ವಾಮನ ಪಾತಾಳ ಲೋಕಕ್ಕೆ ತಳ್ಳಿ ಬಿಡುತ್ತಾನೆ .ನಂತರ ಬಲಿ ಚಕ್ರವರ್ತಿಗೆ ವಾಮನ ರೂಪಿಯಾಗಿದ್ದ ವಿಷ್ಣು ತನ್ನ ನಿಜ ದರ್ಶನ ನೀಡಿದ.