ಸೌಜನ್ಯ ಪರ ಹೋರಾಟಗಾರ ಹಾಗೂ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಇತ್ತೀಚೆಗೆ ಬ್ರಹ್ಮಾವರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿ ಜಾಮೀನಿನ ಮೇಲೆ ಹೊರಗಿದ್ದಾರೆ. ಆದ್ರೆ ಇದೀಗ ಪೊಲೀಸರು ಮನೆಗೆ ನೋಟಿಸ್ ಅಂಟಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಸೆಪ್ಟೆಂಬರ್ 19ರಂದು ಬೆಳಿಗ್ಗೆ ಅವರ ಮನೆಗೆ ತೆರಳಿದ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಅವರು ಸೆಪ್ಟೆಂಬರ್ 21 ರಂದು ವಿಚಾರಣೆಗೆ ಹಾಜರಾಗಬೇಕಾಗಿದೆ. ಈ ನೋಟಿಸ್ ಶಸ್ತ್ರಾಸ್ತ್ರಗಳ ಕಾಯಿದೆಯಡಿ ದಾಖಲಾಗಿರುವ ಪ್ರಕರಣದ ಪೂರಕ ತನಿಖೆಯ ಭಾಗವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ, ಭಯೋತ್ಪಾದನೆ ಮತ್ತು ಶಸ್ತ್ರಾಸ್ತ್ರ ಕಾನೂನು ಉಲ್ಲಂಘನೆಯ ಆರೋಪದಡಿ ತನಿಖೆ ನಡೆಯುತ್ತಿದೆ.
ಚಿನ್ನಯ್ಯನಿಗೆ ಆಶ್ರಯ ಕೊಟ್ಟ ಹಿನ್ನೆಲೆಯಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಮಹೇಶ್ ಶೆಟ್ಟಿ ತಿಮರೋಡಿ ಬುರುಡೆ ಚಿನ್ನಯ್ಯನಿಗೆ ಆಶ್ರಯ ನೀಡಿದ್ದ. ಈ ಶಂಕೆಯ ಮೇರೆಗೆ SIT ತಂಡವು ಆಗಸ್ಟ್ 26ರಂದು ಉಜಿರೆಯಲ್ಲಿರುವ ಅವರ ನಿವಾಸದಲ್ಲಿ ಶೋಧ ಕಾರ್ಯಚರಣೆ ನಡೆಸಿತ್ತು. ಈ ವೇಳೆ ಬಂದೂಕು, ಎರಡು ತಲವಾರುಗಳು ಸೇರಿದಂತೆ ಕೆಲವು ಶಂಕಿತ ವಸ್ತುಗಳು ಪತ್ತೆಯಾಗಿದ್ದವು.
ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು ಮಹಜರ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಈ ಮಧ್ಯೆ, ಸೆಪ್ಟೆಂಬರ್ 16ರಂದು ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾನೂನು ಉಲ್ಲಂಘನೆ ಕುರಿತಂತೆ ಅಧಿಕೃತವಾಗಿ ದೂರು ದಾಖಲಿಸಲಾಗಿದೆ. ಪ್ರಕರಣವನ್ನು ಮುಂದಿನ ತನಿಖೆಗೆ ಹಸ್ತಾಂತರಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಅವರು ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವುದು ಕಡ್ಡಾಯವಾಗಿದೆ. ನಿಗದಿತ ದಿನಾಂಕವಾದ ಸೆಪ್ಟೆಂಬರ್ 21ರಂದು ತಿಮರೋಡಿ ಅವರು ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಸ್ಪಷ್ಟನೆ ನೀಡಬೇಕಿದೆ.
ವರದಿ : ಲಾವಣ್ಯ ಅನಿಗೋಳ