ಬಿಹಾರ ಚುನಾವಣೆಯ ನಂತರವೇ ಕಾಂಗ್ರೆಸ್ ಹೈಕಮಾಂಡ್ ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನಾರಚನೆ ಕುರಿತು ತೀರ್ಮಾನ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಹತ್ವದ ಸುಳಿವು ನೀಡಿದ್ದಾರೆ. ಬೆಂಗಳೂರು ನಿವಾಸದಲ್ಲಿ ಸೋಮವಾರ ಮಾತನಾಡಿದ ಅವರು, ಬಿಹಾರ ಚುನಾವಣೆಯ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಸಂಭವಿಸಬಹುದೆಂದು ಸೂಚಿನೆ ನೀಡಿದ್ದಾರೆ.

ಬೆಂಗಳೂರು: ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನಾರಚನೆ ಕುರಿತು ನಿರ್ಧಾರ ಕೈಗೊಳ್ಳುವುದು ಸಂಪೂರ್ಣವಾಗಿ ಹೈಕಮಾಂಡ್ ಅವರ ಕರ್ತವ್ಯವಾಗಿದೆ. ನಾವು ಇಲ್ಲಿ ಕುಳಿತು ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಅಗತ್ಯವಿದ್ದರೆ ಬಿಹಾರ ಚುನಾವಣೆಯ ಬಳಿಕ ಹೈಕಮಾಂಡ್ ಅಂತಿಮ ತೀರ್ಮಾನ ಮಾಡುತ್ತಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ಡಿಕೆ ಶಿವಕುಮಾರ್ ಅವರ ಸಿಎಂ ಸ್ಥಾನ ಪ್ರಯತ್ನದ ಕುರಿತು ಮಾತನಾಡಿ, ಶಿವಕುಮಾರ್ ನಮ್ಮ ನಾಯಕ, ನಮ್ಮ ಅಧ್ಯಕ್ಷ ಮತ್ತು ಸಮರ್ಥರು. ಅವರನ್ನು ಹೋಲಿಸಲು ಯಾವ ನಾಯಕಿಗೂ ಸಾಮರ್ಥ್ಯ ಇಲ್ಲ. ಅವರು ಸಿಎಂ ಆಗಬೇಕೇ ಅಥವಾ ಆಗಬಾರದೆಂದು ನಮಗೆ ನಿರ್ಧರಿಸಲು ಹಕ್ಕಿಲ್ಲ. ಹೈಕಮಾಂಡ್ ತೀರ್ಮಾನ ಮಾಡಿದಾಗ ನಾವು ಅದಕ್ಕೆ ಬದ್ಧರಾಗುತ್ತೇವೆ ಎಂದು ಹೇಳಿದ್ದಾರೆ.
ನವೆಂಬರ್ 11ಕ್ಕೆ ಡಿಕೆ ಶಿವಕುಮಾರ್ ರಾಹುಲ್ ಭೇಟಿ ವೇಳಾಪಟ್ಟಿ ಕುರಿತು ಮಾತನಾಡಿದ್ದಾರೆ. ನವೆಂಬರ್ ಕ್ರಾಂತಿ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಎರಡೂವರೆ ವರ್ಷದ ನಂತರ ಏನೇ ಆಗುತ್ತಿರಲಿ, ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ನಾವು ಇಲ್ಲಿ ಮಾತಾಡುವುದರಿಂದ ಗೊಂದಲ ಉಂಟಾಗಬಹುದು. ಸಂಪುಟ ಪುನಾರಚನೆ ಬಗ್ಗೆ ಯಾರೂ ನನಗೆ ತಿಳಿಸಲಿಲ್ಲ ಎಂದು ಅವರು ಹೇಳಿದರು.
ಸಚಿವ ಕೆ. ಹೆಚ್. ಮುನಿಯಪ್ಪ ಸಿಎಂ ಸ್ಥಾನಕ್ಕೆ ಪ್ರಸ್ತಾಪಗೊಂಡ ವಿಷಯದ ಬಗ್ಗೆ ಕೂಡ ಪರಮೇಶ್ವರ್ ಮಾತನಾಡಿದ್ದಾರೆ. ಮುನಿಯಪ್ಪ ಪಕ್ಷದಲ್ಲಿ ಹಿರಿಯರು ಮತ್ತು ಸಮರ್ಥರು. ಅವರು ಸಮುದಾಯದಲ್ಲಿ ಪ್ರತಿಷ್ಠಿತರು. ಮುನಿಯಪ್ಪ ಸಿಎಂ ಆದ್ರೇ ತಪ್ಪೇನು? ನಾನು ಕೂಡ ಸಂತೋಷ ಪಡುತ್ತೇನೆ. ಆದರೆ ಸಿಎಂ ಆಯ್ಕೆ ಹೈಕಮಾಂಡ್ ನವರ ಹಕ್ಕು. ಈಗ ಬಿಹಾರ ಚುನಾವಣೆಯಲ್ಲಿ ಹೈಕಮಾಂಡ್ ಬ್ಯುಸಿ ಇದ್ದಾರೆ ಎಂದು ಜಿ ಪರಮೇಶ್ವರ್ ನಿರೂಪಿಸಿದರು.
ವರದಿ : ಲಾವಣ್ಯ ಅನಿಗೋಳ

