ಬಿಗ್ ಬಾಸ್ ಕನ್ನಡ ಸೀಸನ್ 12 ಈಗಾಗಲೇ 40 ದಿನಗಳನ್ನು ಪೂರೈಸಿದೆ. ಈ ಸೀಸನ್‌ನ ಸ್ಪರ್ಧಿಗಳಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಡುವೆ ಗಿಲ್ಲಿ ನಟನ ಆಟವೇ ಗೆಲುವಿನತ್ತ ಸಾಗುತ್ತಿದೆ ಎಂಬ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಗಟ್ಟಿ ಧ್ವನಿಯಲ್ಲಿ ಕೇಳಿಬರುತ್ತಿವೆ.
ಕಳೆದ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮಲ್ಲಮ್ಮ ಅವರು ನೇರವಾಗಿ ಗಿಲ್ಲಿಯೇ ಈ ಸೀಸನ್ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅಭಿಮಾನಿಗಳಲ್ಲೂ ಹೊಸ ಸಂಚಲನ ಮೂಡಿಸಿದೆ. ಗಿಲ್ಲಿ ಮನೆಯಲ್ಲಿ ತನ್ನ ಹಾಸ್ಯಭರಿತ ಶೈಲಿ, ಬುದ್ಧಿವಂತಿಕೆಯಿಂದ ಮಾತಾಡುವ ನುಡಿಗಟ್ಟು, ಹಾಗೂ ಎಲ್ಲರೊಂದಿಗೆ ಹೊಂದಿಕೊಳ್ಳುವ ಧೋರಣೆಯಿಂದ ಗಮನ ಸೆಳೆದಿದ್ದಾರೆ. ಯಾರಿಗೂ ಕಡಿಮೆ ಅಲ್ಲ ಎನ್ನುವ ರೀತಿಯಲ್ಲಿ ಆಟ ಆಡುತ್ತಿರುವ ಗಿಲ್ಲಿ ಮನರಂಜನೆಯ ಜೊತೆಗೆ ಕಣದಲ್ಲೂ ಕಠಿಣ ಸ್ಪರ್ಧೆ ನೀಡುತ್ತಿದ್ದಾರೆ.
ಮಲ್ಲಮ್ಮ ಅವರು ಹೊರಬಂದ ಬಳಿಕ ನೀಡಿದ ಸಂದರ್ಶನದಲ್ಲಿ ಸ್ಪಷ್ಟವಾಗಿ ಹೇಳಿದ್ದೇ, ಗಿಲ್ಲಿ ಬಿಗ್ ಬಾಸ್ ಗೆಲ್ಲುತ್ತಾನೆ ಅನಿಸುತ್ತಿದೆ. ಕಾಮಿಡಿ ಚೆನ್ನಾಗಿ ಮಾಡ್ತಾನೆ, ಎಲ್ಲರಿಗೂ ಸಮರ್ಪಕವಾಗಿ ಉತ್ತರ ಕೊಡ್ತಾನೆ ಎಂದು. ಅವರ ಈ ಹೇಳಿಕೆಗೆ ಅನೇಕ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.
ಯಾರನ್ನಾದರೂ ಮನೆಗೆ ಮರಳಿ ಕರೆತರಬೇಕಾದರೆ ಯಾರನ್ನು ಕರೆದು ತರುತ್ತೀರಿ ಎಂಬ ಪ್ರಶ್ನೆಗೆ ಮಲ್ಲಮ್ಮ ಅವರು ಅಶ್ವಿನಿ ಗೌಡ ಹೆಸರನ್ನು ಉಲ್ಲೇಖಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಐದು ವಾರಗಳ ಕಾಲ ಕಳೆದಿದ್ದ ಮಲ್ಲಮ್ಮ ಆಟದ ಶೈಲಿಯಲ್ಲಿ ಸ್ವಲ್ಪ ಎಡವಿದರೂ, ಗಿಲ್ಲಿಯ ಆಟದ ಬಗ್ಗೆ ತಾವು ನಂಬಿಕೆ ಇಟ್ಟಿರುವುದಾಗಿ ತಿಳಿಸಿದ್ದಾರೆ.
ಒಟ್ಟಿನಲ್ಲಿ, ಬಿಗ್ ಬಾಸ್ ಸೀಸನ್ 12ರ ವೇದಿಕೆಯಲ್ಲಿ ಈಗ ಗಿಲ್ಲಿಯ ಹವಾ ಬಲವಾಗಿದೆ. ಪ್ರೇಕ್ಷಕರ ಪ್ರೀತಿಯ ಜೊತೆಗೆ ಸ್ಪರ್ಧಿಗಳ ಮೆಚ್ಚುಗೆಯೂ ಅವರಿಗೆ ಸಿಕ್ಕಿರುವುದರಿಂದ, ಅವರ ಗೆಲುವಿನ ಭವಿಷ್ಯ ನುಡಿ ಈಗ ರಾಜಕೀಯದಂತೆಯೇ ಬಿಗ್ ಬಾಸ್ ಮನೆಯಲ್ಲಿ ಚರ್ಚೆಯ ಹಾಟ್ ಟಾಪಿಕ್ ಆಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

