ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ. ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಗೆ ಖರ್ಗೆ ಅವರನ್ನ ದಾಖಲಾಗಿದ್ದಾರೆ. ಸದ್ಯ ಖರ್ಗೆ ಅವರು ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದ ಮೇಲೆ ಹಿರಿಯ ವೈದ್ಯರ ತಂಡ ತೀವ್ರ ನಿಗಾ ಇರಿಸಿದ್ದಾರೆ. ಖರ್ಗೆ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ತಿಳಿದುಬಂದಿದೆ.
ಮಲ್ಲಿಕಾರ್ಜುನ ಖರ್ಗೆ ಅವರು ನಿನ್ನೆ ಅಂದ್ರೆ ಮಂಗಳವಾರ ಎಂದಿನಂತೆಯೇ ರಾಜಕೀಯ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದರು. ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಮತ್ತು ಬೆಳೆ ಹಾನಿ ಬಗ್ಗೆ ಬೆಂಗಳೂರಿನಲ್ಲಿ ಅವರು ಮಾತನಾಡಿದ್ದರು. ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಮತ್ತು ಬೆಳೆ ಹಾನಿಗೆ ಪರಿಹಾರ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮನವಿ ಮಾಡುವುದಾಗಿ ಹೇಳಿದ್ದರು.
ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಬಿಹಾರ ಚುನಾವಣೆಯ ಹಿನ್ನೆಲೆ ಸರಣಿ ಸಭೆಗಳನ್ನ ನಡೆಸಿದ್ದರು. ದೆಹಲಿ, ಬಿಹಾರದ ಪ್ರವಾಸ, ಓಡಾಟದ ಹಿನ್ನೆಲೆಯಲ್ಲಿ ಖರ್ಗೆ ಆಯಾಸಗೊಂಡಿದ್ದರು. ಈ ಬಾರಿ ಬಿಹಾರವನ್ನ ಗೆಲ್ಲಲು ಕಾಂಗ್ರೆಸ್ ನಾಯಕರು ಪಣತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮಿತ್ರಪಕ್ಷಗಳ ಜೊತೆ ಸೇರಿ ರಣತಂತ್ರ ಹೆಣೆದಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನ ಬಿಹಾರದಲ್ಲಿ ಸಕ್ರಿಯರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆರೋಗ್ಯ ಕೈ ಕೊಟ್ಟಿದೆ. ಚಿಕಿತ್ಸೆ ಪಡೆದ ಬಳಿಕ ಮತ್ತೆ ಚುನಾವಣಾ ರಾಜಕೀಯದಲ್ಲಿ ಬ್ಯುಸಿಯಾಗಲಿದ್ದಾರೆ ಎನ್ನಲಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ