ನವದೆಹಲಿ : ಬಿಹಾರದಲ್ಲಿ ಕೆಲವೇ ತಿಂಗಳುಗಳಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಈಗಿನಿಂದಲೇ ತಮ್ಮ ತಯಾತಿ ಶರುಮಾಡಿಕೊಂಡಿವೆ. ಕಳೆದ ಕೆಲ ದಿನಗಳ ಹಿಂದಷ್ಟೇ ಬಿಹಾರಕ್ಕೆ ಬೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಪಕ್ಷಗಳ ವಿರುದ್ಧ ಅಬ್ಬರಿಸುವ ಮೂಲಕ ತಮ್ಮ ಚುನಾವಣಾ ರಣ ಕಹಳೆ ಮೊಳಗಿಸಿದ್ದರು. ಇನ್ನೂ ಇದೀಗ ಕಾಂಗ್ರೆಸ್ ಕೂಡ ಈಗಿನಿಂದಲೇ ತಾಲೀಮು ನಡೆಸಿ “ಬಿ” ಹಾರವನ್ನು ತನ್ನ ಕೊರಳಿಗೆ ಹಾಕಿಕೊಳ್ಳಲು ಪ್ರಯತ್ನ ನಡೆಸುತ್ತಿದೆ.
ಇನ್ನೂ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಹಾರದಲ್ಲಿ ಕಾಂಗ್ರೆಸ್ ಸಮಾವೇಶಗಳನ್ನು ನಡೆಸುವುದರ ಜೊತೆಗೆ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸಲು ಮುಂದಾಗಿದೆ. ಅಲ್ಲದೆ ಮೊದಲ ಭಾಗವೆಂಬಂತೆ ಬಿಹಾರದ ಬಕ್ಸಾರ್‌ನಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ರ್‍ಯಾಲಿಯನ್ನು ನಡೆಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾವು ತಲೆಬಾಗುವುದಿಲ್ಲ..
ಪಂಡಿತ್ ಜವಾಹರಲಾಲ್ ನೆಹರು ನ್ಯಾಷನಲ್ ಹೆರಾಲ್ಡ್ ಅನ್ನು ಪ್ರಾರಂಭಿಸಿದ್ದರು. ಇದಲ್ಲದೆ, ನವಜೀವನ್ ಪತ್ರಿಕೆ ಮತ್ತು ಕ್ವಾಮಿ ಆವಾಜ್ ಕೂಡ ಆಗ ಪ್ರಾರಂಭವಾಗಿತ್ತು. ಈ ಪತ್ರಿಕೆಗಳನ್ನು ಪ್ರಾರಂಭಿಸುವ ಉದ್ದೇಶ ದೇಶವನ್ನು ಸ್ವತಂತ್ರಗೊಳಿಸುವುದು, ದೇಶದ ಜನರನ್ನು ಜಾಗೃತಗೊಳಿಸುವುದು ಮತ್ತು ಜನರ ಧ್ವನಿಯನ್ನು ಬ್ರಿಟಿಷ್ ಸರ್ಕಾರಕ್ಕೆ ತಲುಪಿಸುವುದಾಗಿತ್ತು. ಈ ನ್ಯಾಷನಲ್ ಹೆರಾಲ್ಡ್ ಸಂಬಂಧಿತ ವಿಷಯದ ಬಗ್ಗೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಕಾಂಗ್ರೆಸ್ ಪಕ್ಷವನ್ನು ಹೆದರಿಸಲು ಬಯಸುತ್ತಾರೆ, ಆದರೆ ನಾವು ಹೆದರುವುದಿಲ್ಲ ಹಾಗೂ ಯಾವುದೇ ಕಾರಣಕ್ಕೂ ತಲೆ ಬಾಗುವುದಿಲ್ಲ ಎಂದು ಅವರು ಗಡುಗಿದ್ದಾರೆ.
ಮೋದಿ ಬರೀ ಸುಳ್ಳು ಹೇಳುತ್ತಾರೆ..
ಕಳೆದ 2015ರ ಆಗಸ್ಟ್8 ರಂದು ಬಿಹಾರಕ್ಕೆ ಬಂದಿದ್ದ ವೇಳೆ ನಾನು ಎಷ್ಟು ಪ್ಯಾಕೇಜ್ ನೀಡಬೇಕು ಎಂದು ಹೇಳಿ? ಅಂತ ನರೇಂದ್ರ ಮೋದಿ ಜನರನ್ನು ಕೇಳಿದ್ದರು, ಆಗ ಅವರು ಬಿಹಾರಕ್ಕೆ 1.25 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ನೀಡುವುದಾಗಿ ಭರವಸೆಯನ್ನೂ ನೀಡಿದ್ದರು. ಬಹುಶಃ ನೀವು ಈ ಪ್ಯಾಕೇಜ್ ಪಡೆದಿರಬಹುದು ಎಂದು ನಾನು ಭಾವಿಸುತ್ತೇನೆ, ಆದರೆ ಸತ್ಯವೆಂದರೆ ನರೇಂದ್ರ ಮೋದಿಯವರ ಈ ಹೇಳಿಕೆಯೂ ಸುಳ್ಳಾಗಿದೆ. ಅಂದರೆ ನರೇಂದ್ರ ಮೋದಿ ಸುಳ್ಳುಗಳನ್ನು ಮಾತ್ರ ಹೇಳುತ್ತಾರೆ ಎಂದು ಖರ್ಗೆ ಜರಿದಿದ್ದಾರೆ. ಅವರ ಜೊತೆ ಅಮಿತ್ ಶಾ ಕೂಡ ದೇಶದ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಅಲ್ಲದೆ ಈಗ ಆ ಭರವಸೆ ಏನಾಯಿತು ಎಂದು ರಾಜ್ಯದ ಜನರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನೂ ಪ್ರಶ್ನಿಸಬೇಕು ಎಂದು ಹೇಳಿದ್ದಾರೆ.
ಬಿಜೆಪಿ ಗೋಡ್ಸೆಯನ್ನು ಪೂಜಿಸುತ್ತದೆ..
ಮಹಾತ್ಮ ಗಾಂಧಿಯವರಂತಹ ಮಹಾನ್ ವ್ಯಕ್ತಿಯನ್ನು ಗೋಡ್ಸೆ ಕೊಲೆ ಮಾಡಿದ್ದನು. ಇಂದು ಬಿಜೆಪಿಯ ಜನರು ಅದೇ ಗೋಡ್ಸೆಯನ್ನೇ ಪೂಜಿಸುತ್ತಾರೆ. ಆರ್‌ಎಸ್‌ಸ್‌ನ ಜನರು ಬ್ರಿಟಿಷರ ಏಜೆಂಟರಾಗಿದ್ದರು. ಅವರು ಗಾಂಧೀಜಿಯವರಿಗಾಗಿ ಕೆಲಸ ಮಾಡುತ್ತಿದ್ದರು ಮತ್ತು ಆಗಾಗ ಕ್ಷಮೆಯಾಚನೆ ಪತ್ರ ಬರೆಯುತ್ತಿದ್ದರು. ಆದರೆ ಇಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗಾಂಧೀಜಿಯನ್ನು ಕೊಂದ ವ್ಯಕ್ತಿಯ ಪೂರ್ವಜರನ್ನೇ ಭೇಟಿಯಾಗಿದ್ದಾರೆ ಎಂದು ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಗುರಿಯಾಗಿಸಿಕೊಂಡು ಖರ್ಗೆ ಟೀಕಾ ಪ್ರಹಾರ ನಡೆಸಿದ್ದಾರೆ. ಮೋದಿ ಯುವ ಜನರಿಗೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಅಂತೆಯೇ ವಿದೇಶಗಳಿಂದ ಕಪ್ಪುಹಣ ಹಿಂದಕ್ಕೆ ತರುವ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಜಮೆ ಮಾಡುವ ಭರವಸೆಗಳನ್ನೂ ನೀಡಿದ್ದರು. ಅವೆಲ್ಲ ಏನಾದವು ಎಂದು ಅವರು ಪ್ರಶ್ನಿಸಿದ್ದಾರೆ.
ಮೋದಿ, ನಿತೀಶ್ ಜೋಡಿ ಕೇವಲ ಕುರ್ಚಿಗಷ್ಟೇ..!
ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ದೇಶದ ಏಕತೆಗಾಗಿ ಹುತಾತ್ಮರಾಗಿದ್ದಾರೆ. ಜವಾಹರಲಾಲ್ ನೆಹರು ಅವರೇ ಹಲವು ವರ್ಷಗಳ ಕಾಲ ಜೈಲಿನಲ್ಲಿದ್ದರು. ಈಗ ನರೇಂದ್ರ ಮೋದಿ ಅಂತಹ ಕುಟುಂಬವನ್ನು ಹೆದರಿಸಲು ಹೊರಟಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಲು ಹಿಂಜರಿಯದ ಕಾಂಗ್ರೆಸ್ ಜನರನ್ನು ಆರ್‌ಎಸ್‌ಎಸ್-ಬಿಜೆಪಿ ಜನರು ಹೆದರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಜೋಡಿ ಕೇವಲ ಕುರ್ಚಿಗಾಗಿ ರಚನೆಯಾಗಿದ್ದು, ಬಿಹಾರದ ಅಭಿವೃದ್ಧಿಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಟೀಕಿಸಿದ್ದಾರೆ.
ಇನ್ನೂ ಪ್ರಮುಖವಾಗಿ ಕೇಂದ್ರದಲ್ಲಿರುವ ಮೋದಿ ಸರ್ಕಾರಕ್ಕೆ ಬಿಹಾರ ಚುನಾವಣೆಯು ತೀವ್ರ ಪ್ರತಿಷ್ಠೆಯ ವಿಚಾರವಾಗಿದೆ. ಯಾಕೆಂದರೆ ಈಗಾಗಲೇ ಘೋಷಿಸಿರುವಂತೆ ಬಿಹಾರದಲ್ಲಿ ಮತ್ತೊಮ್ಮೆ ಎನ್‌ಡಿಎ ರಾಜ್ಯಭಾರವನ್ನು ನಿತೀಶ್ ನೇತೃತ್ವದಲ್ಲಿ ಕಾಣುವುದು ಬಿಜೆಪಿಯ ಲೆಕ್ಕಾಚಾರವಾಗಿದೆ. ಅಲ್ಲದೆ ನಿತೀಶ್ ಕುಮಾರ್ ಅವರನ್ನೂ ಮತ್ತಷ್ಟು ಪವರ್ ಫುಲ್ ಮಾಡುವ ಯೋಚನೆ ಮೋದಿ ಹಾಗೂ ಅಮಿತ್ ಶಾ ಜೋಡಿಯಲ್ಲಿದೆ. ಹೀಗಾಗಿ ನಿತೀಶ್ ಕುಮಾರ್ ಅವರನ್ನು ಬಿಹಾರದಲ್ಲಿ ಮತ್ತೆ ಸಿಎಂ ಮಾಡಲು ಕೇಸರಿ ಪಾಳಯ ಪಣ ತೊಟ್ಟಿದೆ. ಅಲ್ಲದೆ ನಾವ್ಯಾರಿಗೂ ಕಡಿಮೆ ಇಲ್ಲ ಎನ್ನುತ್ತಿರುವ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟವೂ ಚುನಾವಣಾ ಸಿದ್ದತೆಗಳಲ್ಲಿ ತೊಡಗಿಸಿಕೊಂಡಿದೆ. ಆರ್‌ಜೆಡಿಯು ಲಾಲು ಪುತ್ರ ತೇಜಸ್ವಿ ಯಾದವ್ ಅವರನ್ನು ಸಿಎಂ ಮಾಡುವ ಚಿಂತನೆ ಮುಂದುವರೆದಿದೆ. ಬಿಹಾರದಲ್ಲಿ ನಿತೀಶ್ ಮಣಿಸಲು ಇಂಡಿಯಾ ಕೂಟ ಸರ್ವ ರೀತಿಯಿಂದಲೂ ತಯಾರಿ ನಡೆಸುತ್ತಿದೆ. ಅಂತಿಮವಾಗಿ ಚುನಾವಣೆ ನಡೆದು ಫಲಿತಾಂಶ ಬಂದ ಬಳಿಕವೇ ಎಲ್ಲವೂ ತಿಳಿಯಲಿದೆ.