ಅವರು ಆಗಿನ್ನೂ ಮಗು – ಅಮಿತ್ ಷಾಗೆ ಎಚ್ಚರಿಸಿದ ಖರ್ಗೆ!

ದೇಶದ ರಾಜಕಾರಣದಲ್ಲಿ ಮತ್ತೊಮ್ಮೆ ರಾಷ್ಟ್ರೀಯ ಗೀತೆ ಹಾಗೂ ದೇಶಭಕ್ತಿಯ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ವಂದೇ ಮಾತರಂ ಅಪಮಾನ ಆರೋಪ ಮಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಡಕ್ ತಿರುಗೇಟು ನೀಡಿದ್ದಾರೆ.

ಗೋವಾದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಖರ್ಗೆ, ಅಮಿತ್ ಶಾ ಅವರು ಗಾಂಧಿ ಕುಟುಂಬದ ವಿರುದ್ಧ ವಿನಾಕಾರಣ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ತಾವು ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದಾಗ ಅಮಿತ್ ಶಾ ಅವರು ಕೇವಲ ಒಂಭತ್ತು ವರ್ಷದ ಮಗುವಾಗಿದ್ದರು! ಅಂತಹವರು ಇಂದು ತಮಗೆ ದೇಶಭಕ್ತಿಯ ಪಾಠ ಮಾಡಲು ಬರುತ್ತಿದ್ದಾರೆ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ಅವರು ವಂದೇ ಮಾತರಂ ಗೀತೆಯನ್ನು ಮಧ್ಯದಲ್ಲೇ ತಡೆದರು ಎಂಬ ಅಮಿತ್ ಶಾ ಆರೋಪವನ್ನು ಕಾಂಗ್ರೆಸ್ ತಳ್ಳಿಹಾಕಿದ್ದು, ಅಂದು ಪೂರ್ಣ ಗೀತೆಯನ್ನು ಹಾಡಲಾಗಿತ್ತು ಎಂದು ಸ್ಪಷ್ಟಪಡಿಸಿದೆ.

ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರ ದೇಶಭಕ್ತಿಯನ್ನು ಪ್ರಶ್ನಿಸಿರುವ ಖರ್ಗೆ, ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ನಾಯಕರು ಹೋರಾಡಿದ್ದಾರೆ. ಆದರೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಕನಿಷ್ಠ ಒಬ್ಬ BJP ಅಥವಾ RSS ವ್ಯಕ್ತಿಯನ್ನು ತೋರಿಸಿ ಎಂದು ಸವಾಲು ಹಾಕಿದ್ದಾರೆ. ಹಾಗಿರುವಾಗ ತಮ್ಮ ದೇಶಭಕ್ತಿಯನ್ನು ಪ್ರಶ್ನಿಸುವ ನೈತಿಕ ಹಕ್ಕು ಅವರಿಗಿಲ್ಲ ಎಂದು ಅವರು ಗುಡುಗಿದ್ದಾರೆ.

ರಾಷ್ಟ್ರೀಯ ಗೀತೆ ಹಾಗೂ ಸ್ಥಳ ಶುದ್ಧೀಕರಣದ ವಿಚಾರವನ್ನು ಮುನ್ನೆಲೆಗೆ ತಂದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಡೆದಿರುವ ಈ ಮಾತಿನ ಸಮರ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಕುರಿತು ನಿಮ್ಮ ಅಭಿಪ್ರಾಯವೇನು? ತಪ್ಪದೆ ಕಮೆಂಟ್ ಮಾಡಿ ತಿಳಿಸಿ!

About The Author