ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ವಿರುದ್ಧ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದು ಗುರುವಾರ ವಿಶೇಷ ಹಕ್ಕುಚ್ಯುತಿ ನೊಟೀಸ್ ನ್ನು ರಾಜ್ಯಸಭಾಧ್ಯಕ್ಷರಿಗೆ ಸಲ್ಲಿಸಿದ್ದಾರೆ.
ಅಮಿತ್ ಶಾ ಅವರ ಹೇಳಿಕೆಗಳು ಸಂವಿಧಾನ ಶಿಲ್ಪಿಗೆ ಅವಮಾನವಾಗಿದ್ದು, ಸದನದ ಅವಹೇಳನಕ್ಕೆ ಸಮಾನವಾಗಿದೆ ಮತ್ತು ಸವಲತ್ತು ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಖರ್ಗೆ ರಾಜ್ಯಸಭಾಧ್ಯಕ್ಷರಿಗೆ ನೊಟೀಸ್ ಸಲ್ಲಿಸಿದ್ದಾರೆ. ರಾಜ್ಯಸಭೆಯ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ ನಿಯಮ 188 ರ ಅಡಿಯಲ್ಲಿ ಗೃಹ ವ್ಯವಹಾರಗಳ ಸಚಿವರಾದ ಅಮಿತ್ ಶಾ ಅವರ ವಿರುದ್ಧ ವಿಶೇಷ ಹಕ್ಕುಚ್ಯುತಿ ನೋಟಿಸ್ ನ್ನು ನೀಡುತ್ತೇನೆ ಎಂದು ಖರ್ಗೆ ತಿಳಿಸಿದ್ದಾರೆ.
ಅಮಿತ್ ಶಾ ಅವರು ಮೊನ್ನೆ, ಭಾರತದ ಸಂವಿಧಾನದ 75 ವರ್ಷಗಳ ವೈಭವದ ಪಯಣ ಕುರಿತ ಚರ್ಚೆಗೆ ರಾಜ್ಯಸಭೆಯಲ್ಲಿ ಉತ್ತರ ನೀಡುತ್ತಿದ್ದ ವೇಳೆ, ಅಂಬೇಡ್ಕರ್ ಅವರಿಗೆ ಅವಮಾನಕರ ಮತ್ತು ಮಾನಹಾನಿಕರವಾಗುವ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಸದನ ಸದಸ್ಯರು ಯಾವುದೇ ದುರ್ನಡತೆ ಅಥವಾ ಪ್ರತಿಬಿಂಬಗಳನ್ನು ಬಿತ್ತರಿಸುವುದು ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡುವುದು ಸವಲತ್ತುಗಳ ಉಲ್ಲಂಘನೆ ಮತ್ತು ಸದನಕ್ಕೆ ತೋರಿಸುವ ಅಗೌರವವಾಗಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಬಳಸುವುದು ಡಾ. ಅಂಬೇಡ್ಕರ್ ಅವರಿಗೆ ಸ್ಪಷ್ಟವಾದ ಅವಮಾನವಾಗಿದೆ. ಸದನದೊಳಗೆ ನೀಡಿದ ಹೇಳಿಕೆಗಳು ಸಂಪೂರ್ಣವಾಗಿ ಅವಹೇಳನಕಾರಿಯಾಗಿದೆ. ಅಮಿತ್ ಶಾ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.