ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧದ ಮುಡಾ ಹಗರಣದ ಸಂಘರ್ಷ ತಾರಕಕ್ಕೇರಿರೋ ಹೊತ್ತಲ್ಲೇ ಇದೀಗ ಭೂ ಹಗರಣದ ಭೂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕುಟುಂಬದ ಬೆನ್ನತ್ತಿದೆ. ಖರ್ಗೆ ಕುಟುಂಬಕ್ಕೆ ಸೇರಿದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಸಿಎ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವಿನ ಸಂಘರ್ಷ ಮತ್ತಷ್ಟು ತಾರಕಕ್ಕೇರಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB)ಯಿಂದ ನಿಯಮಗಳನ್ನ ಉಲ್ಲಂಘಿಸಿ ಖರ್ಗೆ ಕುಟುಂಬದ ಟ್ರಸ್ಟ್‌ಗೆ ಸಿಎ ನಿವೇಶ ಹಂಚಿಕೆ ಮಾಡಿದೆ ಅನ್ನೋ ಆರೋಪ ಕೇಳಿ ಬಂದಿದೆ. ಈ ಕುರಿತು ಸ್ಪಷ್ಟನೆ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವ್ರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಪತ್ರ ಬರೆದಿದ್ದಾರೆ. ಖರ್ಗೆ ಒಡೆತನದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ KIADB ಸಿಎ ನಿವೇಶನ ನೀಡಿದ ಪ್ರಕರಣದ ಬಗ್ಗೆ ವಿವರಣೆ ಕೊಡಿ ಎಂದು ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಕುಟುಂಬದ ವಿರುದ್ಧ ಬಂದಿರುವ ದೂರಿನ ಬಗ್ಗೆ ದಾಖಲೆ ಸಹಿತ ವಿವರವಾದ ಮಾಹಿತಿಯನ್ನು ಕೊಡಿ. ಈ ಪ್ರಕರಣದಲ್ಲಿ ನಿಯಮಗ ಉಲ್ಲಂಘನೆ ಆಗಿದೆಯೇ..? ತರಾತುರಿಯಲ್ಲಿ ನಿರ್ಣಯ ಕೈಗೊಂಡಿರುವುದಕ್ಕೆ ಕಾರಣವೇನು..? ಎಂಬುದರ ವಿವರ ನೀಡುವಂತೆ ಚೀಫ್ ಸೆಕ್ರೆಟರಿ ಶಾಲಿನಿ ರಜನೀಶ್ ಅವರಿಗೆ ರಾಜ್ಯಪಾಲರು ಸೂಚಿಸಿದ್ದಾರೆ..
ಮಲ್ಲಿಕಾರ್ಜುನ ಖರ್ಗೆ ಪುತ್ರ ರಾಹುಲ್ ಖರ್ಗೆ ನೇತೃತ್ವದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಬೆಂಗಳೂರಿನ ಏರೋಸ್ಪೇಸ್ ಪಾರ್ಕ್ನಲ್ಲಿ ರಾಜ್ಯ ಸರ್ಕಾರ ನಿಯಮಗಳನ್ನ ಗಾಳಿಗೆ ತೂರಿ ತರಾತುರಿಯಲ್ಲಿ 5 ಎಕರೆ ಸಿಎ ನಿವೇಶನವನ್ನು ಮಂಜೂರು ಮಾಡಿದೆ ಅಂತ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯಪಾಲರಿಗೆ ದೂರು ನೀಡಿದ್ದರು.
ಸಿಎ ನಿವೇಶನಕ್ಕಾಗಿ ಒಟ್ಟು 193 ಸಂಸ್ಥೆಗಳು KIADBಗೆ ಅರ್ಜಿ ಹಾಕಿದ್ವು. ಈ ಪೈಕಿ 43 ಸಂಸ್ಥೆಗಳು ಆಯ್ಕೆ ಆಗಿದ್ದವು. ಅವುಗಳಲ್ಲಿ ಖರ್ಗೆ ಕುಟುಂಬಕ್ಕೆ ಸೇರಿದ ಸಿದ್ದಾರ್ಥ ವಿಹಾರ ಟ್ರಸ್ಟ್ ಕೂಡ ಒಂದು. ಈ ರೀತಿ ಭೂಮಿ ಹಂಚಿಕೆ ಆಗಿರೋದರ ಹಿಂದೆ ಪ್ರಭಾವ ಕೆಲಸ ಮಾಡಿದೆ. ಇದರಲ್ಲಿ ಸ್ವಜನಪಕ್ಷಪಾತ ಎದ್ದು ಕಾಣುತ್ತಿದ್ದು, ಸೂಕ್ತ ತನಿಖೆ ಆಗಬೇಕು ಅಂತ ಛಲವಾದಿ ನಾರಾಯಣಸ್ವಾಮಿ ದೂರಿನಲ್ಲಿ ಆಗ್ರಹಿಸಿದ್ದರು.
ಮಾರ್ಚ್ 4ರಂದು KIADBಯಿಂದ ಅರ್ಜಿಗಳ ಪರಿಶೀಲನೆ ನಡೆದಿದ್ದು, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಮಾರ್ಚ್ 5ರಂದು ಸಭೆ ನಡೆಸಿ ನಿರ್ಣಯ ಕೈಗೊಂಡು ಮಾರ್ಚ್ 6ರಿಂದ ಹಂಚಿಕೆ ಪತ್ರಗಳನ್ನ ನೀಡಲಾಗಿದೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಇಷ್ಟೊಂದು ತರಾತುರಿಯಲ್ಲಿ ಯಾಕೆ ಮಾಡಲಾಗಿದೆ..? ಅರ್ಜಿ ಸಲ್ಲಿಸಲು 14 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೂ ಅವಸರದಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಲು ಸ್ವಜನಪಕ್ಷಪಾತವೇ ಕಾರಣ ಅಂತ ದೂರಿನಲ್ಲಿ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದರು.