Monday, September 9, 2024

Latest Posts

New Delhi : CISF ಸಿಬ್ಬಂದಿಗೆ ಮಮತಾ ಸರ್ಕಾರ ಸಹಕರಿಸುತ್ತಿಲ್ಲ.. ದೀದಿ ವಿರುದ್ಧ ಕೇಂದ್ರದ ಕಾನೂನು ಸಮರ

- Advertisement -

ನವದೆಹಲಿ: ಕೋಲ್ಕತ್ತಾ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನು ಮಾತ್ರ ಬೆಚ್ಚಿ ಬೀಳಿಸಿಲ್ಲ. ಬದಲಿಗೆ ರಾಜಕೀಯ ಪಕ್ಷಗಳ ನಡುವಿನ ಕೆಸರೆರಚಾಟಕ್ಕೂ ಕಾರಣವಾಗಿದೆ. ಟ್ರೈನಿ ವೈದ್ಯೆ ಮೇಲೆ ಮೃಗದಂತೆ ಎರಗಿ ಅತ್ಯಾಚಾರವೆಸಗಿ ಆಕೆಯನ್ನ ಹತ್ಯೆ ಮಾಡಿದ ಅತ್ಯಾಚಾರಿಗೆ ಕಠಿಣ ಶಿಕ್ಷೆ ಕೊಡಿಸೋ ಯಾವುದೇ ಉದ್ದೇಶ ಬಹುಶಃ ಮಮತಾ ಸರ್ಕಾರ (Mamata Government)ಕ್ಕಾಗಲಿ ಅಥವಾ ಕೇಂದ್ರ ಸರ್ಕಾರ (Central Government)ಕ್ಕಾಗಲಿ ಇದ್ದಂತೆ ಕಾಣ್ತಿಲ್ಲ. ಬದಲಿಗೆ ಈ ಪ್ರಕರಣವನ್ನೇ ಅಸ್ತ್ರವಾಗಿಟ್ಕೊಂಡು ಟಿಎಂಸಿ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪರಸ್ಪರ ಕೆಸರೆರಚಾಟ ಮಾಡಿಕೊಳ್ಳುವುದರಲ್ಲೇ ನಿರತವಾಗಿವೆ. ಈ ಪ್ರಕರಣದ ವಿಚಾರದಲ್ಲಿ ಈ ಎರಡೂ ಸರ್ಕಾರಗಳ ಕಿತ್ತಾಟ ಸದ್ಯ ತಾರಕಕ್ಕೇರಿದ್ದು, ಇದೀಗ ಸುಪ್ರೀಂಕೋರ್ಟ್ (Supreme Court) ಅಂಗಳ ತಲುಪಿದೆ.

ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಿಸ್ಪಕ್ಷಪಾತ ತನಿಖೆ ನಡೆಸುವಲ್ಲಿ ದೀದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿರುವ ಕೇಂದ್ರ ಗೃಹ ಸಚಿವಾಲಯ (Home Ministry of India) ಇದೀಗ ಸುಪ್ರೀಂ ಕೋರ್ಟ್​ (Supreme Court)ಗೆ ಅರ್ಜಿ (affidavit) ಸಲ್ಲಿಸಿದೆ. ಕೃತ್ಯ ನಡೆದ ಆರ್.ಜಿ ಕರ್​ ಆಸ್ಪತ್ರೆಗೆ ಭದ್ರತೆ ಜವಾಬ್ದಾರಿ ವಹಿಸಿಕೊಂಡಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ (CISF)ಗೆ ಪಶ್ಚಿಮ ಬಂಗಾಳ ಸರ್ಕಾರ ಸಹಕರಿಸಲಿಲ್ಲ. ಮಮತಾ ಸರ್ಕಾರದ ಈ ನಿರ್ಲಕ್ಷ್ಯ ನಡೆಯು ಅನಿರೀಕ್ಷಿತ, ಅಸಮರ್ಥನೀಯ ಮತ್ತು ಕ್ಷಮಿಸಲಾಗದ್ದು ಎಂದು ಕೇಂದ್ರ ಗೃಹ ಸಚಿವಾಲಯ ಆರೋಪಿಸಿದೆ.

 

ಟಿಎಂಸಿ ಸರ್ಕಾರದ ಅಸಹಕಾರವನ್ನು ವ್ಯವಸ್ಥಿತ ಅಸ್ವಸ್ಥತೆಯ ಲಕ್ಷಣ ಎಂದು ಕೇಂದ್ರ ಸರ್ಕಾರ ಜರಿದಿದೆ. ಕೋರ್ಟ್​ ಆದೇಶದಂತೆ ಆರ್‌.ಜಿ ಕರ್ ಆಸ್ಪತ್ರೆಯಲ್ಲಿ ಭದ್ರತೆಗೆ ನಿಯೋಜಿಸಲಾದ ಸಿಐಎಸ್‌ಎಫ್ ಸಿಬ್ಬಂದಿ ವಸತಿ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ತೀವ್ರ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅದ್ರಲ್ಲೂ ಮಹಿಳಾ ಸಿಐಎಸ್​ಎಫ್ ಸಿಬ್ಬಂದಿ ಪ್ರತಿನಿತ್ಯ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಪ್ರಸ್ತುತದಂಥ ಉದ್ವಿಗ್ನ ಪರಿಸ್ಥಿತಿಯಲ್ಲಿ ಇಂತಹ ಅಸಹಕಾರ ಸ್ವೀಕಾರಾರ್ಹವಲ್ಲ. ವೈದ್ಯರು ಮತ್ತು ವಿಶೇಷವಾಗಿ ಮಹಿಳಾ ವೈದ್ಯರ ಸುರಕ್ಷತೆಯು ಬಂಗಾಳ ಸರ್ಕಾರದ ಪ್ರಮುಖ ಆದ್ಯತೆಯಾಗಬೇಕು ಅಂತ ಅರ್ಜಿಯಲ್ಲಿ ಕೇಂದ್ರ ಸರ್ಕಾರ ಆಗ್ರಹಿಸಿದೆ.

ಪ್ರಸ್ತುತ ಕೋಲ್ಕತ್ತಾದ ಶ್ಯಾಮ್ ಪ್ರಸಾದ್ ಮುಖರ್ಜಿ ಪೋರ್ಟ್​ನಲ್ಲಿ ವಾಸ್ತವ್ಯ ಹೂಡಿರೋ ಭದ್ರತಾ ಸಿಬ್ಬಂದಿ ಆರ್.ಜಿ ಕರ್​ ಆಸ್ಪತ್ರೆ ತಲುಪಲು 1 ಗಂಟೆ ಸಮಯ ಬೇಕು. ಇದ್ರಿಂದ ತುರ್ತು ಸಂದರ್ಭಗಳಲ್ಲಿ ಸಿಐಎಸ್‌ಎಫ್ ಪಡೆಗಳನ್ನ ತ್ವರಿತವಾಗಿ ಸಜ್ಜುಗೊಳಿಸೋದು ಕಷ್ಟಕರವಾಗಿದೆ. ಈ ಬಗ್ಗೆ ಮಮತಾ ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದ್ರೂ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಲ್ಲದೆ, ಸೆಪ್ಟೆಂಬರ್​ 2ರಂದು ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನೂ ಕೂಡ ಬರೆಯಲಾಗಿದ್ದು, ಭದ್ರತಾ ಸಿಬ್ಬಂದಿಗೆ ಸೂಕ್ತ ಸೌಕರ್ಯಗಳನ್ನ ಒದಗಿಸುವಂತೆ ಕೋರಲಾಗಿದೆ.

ಆರ್.ಜಿ ಕರ್​ ಆಸ್ಪತ್ರೆಯ ಭದ್ರತೆಗೆ ನಿಯೋಜಿಸಲಾಗಿರುವ ಸಿಐಎಸ್​ಎಫ್​ ಸಿಬ್ಬಂದಿಗೆ ಸಂಪೂರ್ಣ ಸಹಕಾರ ನೀಡುವಂತೆ ಮಮತಾ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ನಿರ್ದೇಶನ ನೀಡಬೇಕು. ಮತ್ತು ನ್ಯಾಯಾಲಯದ ಆದೇಶ ಪಾಲಿಸದ ಬಂಗಾಳದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಅಂತ ಮಾನ್ಯ ಸರ್ವೋಚ್ಛ ನ್ಯಾಯಾಲಯಕ್ಕೆ ಗೃಹ ಸಚಿವಾಲಯ ಮನವಿ ಮಾಡಿದೆ. ಒಟ್ನಲ್ಲಿ, ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೆ, ದೀದಿ ವರ್ಸಸ್ ಕೇಂದ್ರ ಸರ್ಕಾರದ ಕಿತ್ತಾಟದಲ್ಲಿ ಭದ್ರತಾ ಸಿಬ್ಬಂದಿ ಸಂಕಷ್ಟ ಅನುಭವಿಸ್ತಿರೋದಂತೂ ಸುಳ್ಳಲ್ಲ.

- Advertisement -

Latest Posts

Don't Miss