ಅಪ್ಪು ನಮ್ಮೊಂದಿಗೆ ಇಲ್ಲವಾದರೂ, ಅವರು ಕಂಡ ಕನಸು ಇಂದಿಗೂ ಜೀವಂತ. ಪುನೀತ್ ರವರ ಕನಸನ್ನ ನನಸು ಮಾಡುವ ಕಾರ್ಯ ಮುಂದುವರಿಯುತ್ತಿದ್ದು, ಪುನೀತ್ ರಾಜಕುಮಾರ್ ಅವರು ಮೆಚ್ಚಿಕೊಂಡಿದ್ದ ಕಥೆಯೊಂದು ಇದೀಗ ಸಿನಿಮಾ ರೂಪವನ್ನ ಪಡೆದುಕೊಂಡು ರಿಲೀಸ್‌ಗೆ ಸಿದ್ಧವಾಗಿದೆ.
ಅಪ್ಪು ಅವರ ಪಿಆರ್‌ಕೆ ಬ್ಯಾನರ್‌ನಲ್ಲಿ ಸಿದ್ಧವಾದ ‘ಮ್ಯಾನ್ ಆಫ್ ದಿ ಮ್ಯಾಚ್’ ಸಿನಿಮಾವನ್ನು ಡಿ. ಸತ್ಯ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ರಿಲೀಸ್ ಡೇಟ್ ಬಹಿರಂಗೊಂಡಿದ್ದು, ಚಿತ್ರದ ಟ್ರೇಲರ್ ಕೂಡ ಲಾಂಚ್ ಆಗಿದೆ. ಇನ್ನು ಅಮೆಜಾನ್ ಪ್ರೈಮ್‌ನಲ್ಲಿ ಮೇ ೫ಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದೆ.
ನಿರ್ದೇಶಕರೊಬ್ಬರು ತನ್ನ ಮುಂಬರುವ ‘ಮ್ಯಾನ್ ಆಫ್ ದಿ ಮ್ಯಾಚ್’ ಎಂಬ ಸಿನಿಮಾಗೆ ಆಡಿಶನ್ ನಡೆಸುತ್ತಿರುತ್ತಾರೆ. ಜನರು ಪ್ರಾಜೆಕ್ಟ್ ನ ಭಾಗವಾಗಲು ಒಪ್ಪಿದಾಗ, ನಟಿಸಲು ವಿಭಿನ್ನ ಸನ್ನಿವೇಶಗಳನ್ನು ನೀಡಲಾಗುತ್ತದೆ. ಆಗ ಅವರ ಮಧ್ಯೆ ಸಂಘರ್ಷ ಶುರುವಾಗಿ, ಕಥೆ ಎಲ್ಲಿಗೆ ತಲುಪುತ್ತದೆ ಎಂಬುದೇ ಈ ಚಿತ್ರದ ಕಥೆಯಾಗಿದೆ.
ಈ ಬಗ್ಗೆ ನಿರ್ದೇಶಕ ಡಿ. ಸತ್ಯ ಪ್ರಕಾಶ್ ಮಾತನಾಡಿದ್ದು, ‘ಈ ಸಿನಿಮಾ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಒಂದು ದಿನ ಪುನೀತ್ ಸರ್ ಜೊತೆಗೆ ನಾನು ಮಾತನಾಡುತ್ತಿದ್ದೆ. ಆಗಿನ್ನೂ ಮೊದಲ ಲಾಕ್‌ಡೌನ್ ಆಗಿತ್ತು. ಅವರ ಬಳಿ ‘ಮ್ಯಾನ್ ಆಫ್ ದಿ ಮ್ಯಾಚ್’ ಕಥೆಯನ್ನು ಹಂಚಿಕೊಂಡಾಗ ಪುನೀತ್ ಅವರಿಗೆ ತಕ್ಷಣವೇ ಕಥೆ ಇಷ್ಟವಾಯಿತು. ‘ಇದು ಒಂದು ಉತ್ತಮ ಐಡಿಯಾ’ ಎಂದು ಪುನೀತ್ ರವರು ಹೇಳಿದ್ದರು. ಅದಷ್ಟೇ ಅಲ್ಲದೆ ಇದನ್ನು ಸಿನಿಮಾ ಮಾಡುವುದು ಕಷ್ಟ ಅಂತಲೂ ಕೂಡ ಹೇಳಿದ್ದರು. ಆದರೆ, ‘ಇಂಥ ಹೊಸ ಹೆಜ್ಜೆಗಳನ್ನು ನಾವು ಇಡಬೇಕು ಮತ್ತು ಹೊಸ ತಲೆಮಾರಿನ ಸಿನಿಮಾ ನಿರ್ಮಾಣ ಮಾಡಬೇಕು’ ಎಂದು ಪ್ರೋತ್ಸಾಹದ ಮಾತುಗಳನ್ನು ಹೇಳಿದ್ದರು. ಅವರು ಹೇಳಿದ್ದ ಹಾಗೆಯೇ ಈ ಸಿನಿಮಾ ಶುರುವಾಯಿತು’ ಎಂದು ತಿಳಿಸಿದ್ದಾರೆ.
‘ಈ ಸಿನಿಮಾವು ವಿಶಿಷ್ಟ ಪರಿಕಲ್ಪನೆಯನ್ನು ಹೊಂದಿದೆ. ಅಲ್ಲದೆ, ಆಕರ್ಷಕ ಕಲಾವಿದರ ತಂಡವನ್ನು ಹೊಂದಿದೆ. ಹಾಗೆಯೇ ಪ್ರಶಸ್ತಿ ವಿಜೇತ ನಿರ್ದೇಶಕ ಡಿ. ಸತ್ಯ ಪ್ರಕಾಶ್ ಇದರ ನಿರ್ದೇಶನ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಈ ಸಿನಿಮಾ ಇನ್ನಷ್ಟು ನನಗೆ ಕುತೂಹಲ ಮೂಡಿಸಿತು. ನನ್ನ ಪಾತ್ರ ಮತ್ತು ಕಥೆಗೆ ನಾನು ಬೇಗ ಹೊಂದಿಕೊಂಡೆ. ಪರ್ಫಾರ್ಮೆನ್ಸ್ ಮತ್ತು ಹೊಸ ದೃಶ್ಯದ ವಿಧಾನ ನನಗೆ ಸವಾಲಾಗಿತ್ತು. ‘ಮ್ಯಾನ್ ಆಫ್ ದಿ ಮ್ಯಾಚ್’ ತಯಾರಿಸುವ ಸಮಯದಲ್ಲಿ ನಾವು ಅನುಭವಿಸಿದ ಖುಷಿ ಪ್ರೇಕ್ಷಕರ ಅನುಭವಕ್ಕೂ ಕೂಡ ಬರುತ್ತದೆ ಹಾಗೂ ಅವರು ಈ ಸಿನಿಮಾವನ್ನ ಇಷ್ಟಪಡುತ್ತಾರೆ’ ಎಂದು ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ನಟರಾಜ್ ಎಸ್. ಭಟ್ ಹೇಳಿದ್ದಾರೆ.
ನಟರಾಜ್, ಧರ್ಮಣ್ಣ ಜೊತೆಗೆ ವೀಣಾ ಸುಂದರ್, ಸುಂದರ್, ಅಥರ್ವ ಪ್ರಕಾಶ್ ಮತ್ತು ವಾಸುಕಿ ವೈಭವ್ ಮುಖ್ಯ ಮಾತ್ರದಲ್ಲಿ ನಟಿಸಿದ್ದಾರೆ. ಇನ್ನು ಚಿತ್ರಕ್ಕೆ ವಾಸುಕಿ ವೈಭವ್ ಅವರೇ ಸಂಗೀತವನ್ನು ಸಹ ನೀಡಿದ್ದಾರೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ