ಮದುವೆ ಮನೆಯಲ್ಲಿ ಚಿನ್ನ ಕದ್ದು ಮೂರು ನಿವೇಶನ ಖರೀದಿಸಿ, ಒಂದು ಮನೆ ಕಟ್ಟಿಕೊಂಡು ಹೆಂಡತಿ-ಮಕ್ಕಳ ಜತೆ ಆರಾಮದ ಬದುಕು ನಡೆಸುತ್ತಿದ್ದ, ಕಳ್ಳನೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಚಾಲಾಕಿ ಕಳ್ಳನನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ತುಮಕೂರು ಜಿಲ್ಲೆ ಗುಬ್ಬಿ ನಿವಾಸಿ 45 ವರ್ಷದ ಪರಮೇಶ್ ಎಂಬಾತನೇ ಈ ಕುಖ್ಯಾತ ಕಳ್ಳ. ನಗರದ ವಿವಿಧ ಕಲ್ಯಾಣ ಮಂಟಪಗಳಲ್ಲಿ ಟಿಪ್ ಟಾಪ್ ಆಗಿ ಡ್ರೆಸ್ ಹಾಕೊಂಡು ಅತಿಥಿಯ ವೇಷದಲ್ಲಿ ತೆರಳಿ, ಮದುವೆ ಸಮಯದಲ್ಲಿ ವಧು-ವರರ ಕೊಠಡಿಗಳಲ್ಲಿ ಚಿನ್ನಾಭರಣ, ನಗದು ದೋಚುತ್ತಿದ್ದ. ಆ ರೀತಿಯ ಕಳ್ಳತನಗಳಿಂದ ಈತ ಗುಬ್ಬಿಯಲ್ಲಿ, ಪತ್ನಿ ಮತ್ತು ಮಕ್ಕಳ ಹೆಸರಿನಲ್ಲಿ ಮೂರು ನಿವೇಶನ ಖರೀದಿಸಿದ್ದಾನೆ. ಅಲ್ಲದೆ, ಒಂದು ನಿವೇಶನದಲ್ಲಿ ಮನೆ ಕಟ್ಟಿಸಿಕೊಂಡು, ತಾನು ಕಾರು ಸರ್ವಿಸ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದೇನೆಂದು ಕುಟುಂಬಕ್ಕೆ ನಂಬಿಸಿದ್ದ.
ಹೌದು, ಕಲ್ಯಾಣ ಮಂಟಪಗಳಿಗೆ ನೀಟಾಗಿ ಉಡುಪು ಧರಿಸಿ ಅತಿಥಿಯಂತೆ ಪರಮೇಶ್ ತೆರಳುತ್ತಿದ್ದ. ಧಾರೆ ಮಂಟಪದ ಬಳಿ ನಿಲ್ಲುತ್ತಿದ್ದ. ತಾಳಿ ಕಟ್ಟುವ ವೇಳೆ ಫೋನ್ ಬಂದಂತೆ ನಟಿಸುತ್ತಿದ್ದ. ಮಾತಾಡುವ ಸೋಗಿನಲ್ಲಿ ವಧು-ವರರ ಕೋಣೆ ಪ್ರವೇಶಿಸಿ ಸಿಕ್ಕಿದ್ದು ಬಾಚಿಕೊಳ್ಳುತ್ತಿದ್ದ. ಎಲ್ಲರೂ ಮಾಂಗಲ್ಯಧಾರಣೆ ನೋಡುವುದರಲ್ಲಿದ್ರೆ, ಈತ ಕೈಚಳಕ ತೋರುತ್ತಿದ್ದ. ಹೀಗೆ ಪರಮೇಶ್ ಬಂಧನದಿಂದ ಬೆಂಗಳೂರಿನಲ್ಲಿ ವರದಿಯಾಗಿದ್ದ 8 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ಮೇ, 14ರಂದು ರಾಜಾಜಿನಗರ ಕೈಗಾರಿಕಾ ಪ್ರದೇಶದ ಸಮುದಾಯ ಭವನದಲ್ಲಿ ಡಾ. ರಾಜ್ ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಶಿವಶಂಕರ್ ಅವರ ಮಗಳ ಮದುವೆಯಲ್ಲಿ 170 ಗ್ರಾಂ ಚಿನ್ನ ಕಳ್ಳತನವಾಗಿತ್ತು. ಈ ಕುರಿತು ದಾಖಲಾಗಿದ್ದ ದೂರು ಹಿನ್ನೆಲೆ, ಮಾಗಡಿ ರಸ್ತೆ ಠಾಣೆ ಪೊಲೀಸರು ತನಿಖೆ ಆರಂಭಿಸಿದರು.
ಇನ್ಸ್‌ಪೆಕ್ಟರ್ ರಾಜು ನೇತೃತ್ವದ ತಂಡ ಮಂಟಪದ ಸಿಸಿಟಿವಿ ಮತ್ತು ಮದುವೆ ಚಿತ್ರೀಕರಣದ ವಿಡಿಯೋಗಳು ಪರಿಶೀಲಿಸಿದಾಗ, ಪರಮೇಶ್‌ನ ಚಲನವಲನಗಳು ಅನುಮಾನಾಸ್ಪದ ಎನಿಸಿದೆ. ನಂತರ ತುಮಕೂರು ಜಿಲ್ಲೆಯ ಗುಬ್ಬಿ ರೈಲ್ವೆ ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ 36.91 ಲಕ್ಷ ರೂ. ಮೌಲ್ಯದ 400 ಗ್ರಾಂ. ಚಿನ್ನಾಭರಣ, 91 ಸಾವಿರ ರೂಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದೆ.