State News:
ಭೂಮಿ ಉತ್ತಮ ಫಲವತ್ತತೆ ಹೊಂದಿದ್ದರೆ ತೆಂಗನ್ನು ಉತ್ಕೃಷ್ಟವಾಗಿ ಬೆಳೆಯಲು ಸಾಧ್ಯ.ತೆಂಗಿಗೆ ಹೆಚ್ಚು ನೀರನ್ನು ಹಾಕುವುದರಿಂದ ಹೆಚ್ಚು ಫಲವತ್ತತೆ ಬರುತ್ತದೆ.ಸರ್ಕಾರ ನಿಗದಿ ಪಡಿಸಿದ ಕೇಂದ್ರಗಳಲ್ಲಿ ತೆಂಗು ಸಸಿಗಳನ್ನು ಖರೀದಿ ಮಾಡುವುದು ಉತ್ತಮ ಎಂದು ಮೈಸೂರಿನ ತೋಟಗಾರಿಕಾ ಕಾಲೇಜಿನ ಪ್ರೊ.ಸಿದ್ದಪ್ಪ ಅವರು ತಿಳಿಸಿದರು.
ಶ್ರೀರಂಗಪಟ್ಟಣದ ಶ್ರೀರಂಗ ವೇದಿಕೆಯಲ್ಲಿ ನಡೆದ ರೈತ ದಸರಾ ಅಂಗವಾಗಿ ಆಯೋಜಿಸಿದ ಕಿಸಾನ್ ಗೋಷ್ಠಿ ಯಲ್ಲಿ ಅವರು ಮಾತನಾಡಿದರು.ತೆಂಗಿನ ಬುಡಗಳಲ್ಲಿ ಮತ್ತು ಸುತ್ತಮುತ್ತನಲ್ಲಿ ತೆಂಗಿನ ಸಿಪ್ಪೆಗಳನ್ನು ಹಾಗೂ ತ್ಯಾಜ್ಯಗಳನ್ನು ಹೂಳುವಂತಹ ಕೆಲಸವನ್ನು ಮಾಡಿದರೆ ತೆಂಗಿನಲ್ಲಿ ತೇವಾಂಶವನ್ನು ಸಂರಕ್ಷಣೆ ಮಾಡಬಹುದು ಎಂದರು.
ತೆಂಗು ಪ್ರತಿ ತಿಂಗಳಿಗೆ ಒಂದು ಎಲೆ, ಒಂದು ಹೊಂಬಾಳೆ ಹೀಗೆ ಹಂತ ಹಂತವಾಗಿ ಬೆಳೆಯುತ್ತದೆ.ತೆಂಗಿಗೆ ಸಮಯಕ್ಕೆ ಸರಿಯಾಗಿ ಬೇಕಾದಂತಹ ಗೊಬ್ಬರವನ್ನು ನೀಡಿ ಉತ್ತಮ ಫಲವತ್ತತೆ ಬರುವ ರೀತಿಯಲ್ಲಿ ತೆಂಗನ್ನು ಬೆಳೆಯಿರಿ ಎಂದರು.
ಮೈಸೂರು ಕೇಂದ್ರೀಯ ರೇಷ್ಮೆ ಮಂಡಳಿಯ ವಿಜ್ಞಾನಿ ಡಾ.ಕೆ.ಬಿ ಚಂದ್ರಶೇಖರ್ ಅವರು ರೈತರ ಆದಾಯ ದ್ವಿಗುಣಗೊಳಿಸಲು ಬೈವೋಲ್ಟೈನ್(ದ್ವಿ-ತಳಿ) ರೇಷ್ಮೆ ಕೃಷಿಯಲ್ಲಿ ಆಧುನಿಕ ತಾಂತ್ರಿಕತೆಗಳು ಹಾಗೂ ಹಿಪ್ಪುನೇರಳೆ ಮರಗಡ್ಡಿ ಬೇಸಾಯ ಕ್ರಮಗಳ ಕುರಿತು ಉಪನ್ಯಾಸ ನೀಡಿದರು.
ರೇಷ್ಮೆ ಬಿತ್ತನೆಯನ್ನು ಗಿಡ ಪದ್ಧತಿ, ಸಾಲು ಪದ್ಧತಿ ಬೆಳೆಯಲಾಗುತ್ತಿತ್ತು. ಪ್ರಸ್ತುತದಲ್ಲಿ ಮರದ ರೀತಿಯ ಪದ್ಧತಿಗಳಲ್ಲಿ ಹಾಗೂ ವಿವಿಧ ಶೈಲಿಯಲ್ಲಿ ರೇಷ್ಮೆಯನ್ನು ಬೆಳೆಯುತ್ತಿದೇವೆ. ಕಾಲ ಬದಲಾದಂತೆ ಕೃಷಿ ಮಾಡುವ ಶೈಲಿಗಳು ಸಹ ಬದಲಾವಣೆಯಾಗುತ್ತದೆ ಎಂದರು.
ರೈತರು ಕೃಷಿ ಭೂಮಿಯನ್ನು ಚರಂಡಿ ರೀತಿ ಮಾಡಿ ಅಲ್ಲಿಗೆ ಕಸ ಕಡ್ಡಿಯನ್ನು ಹಾಕಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸಿದರೆ ಅದರಿಂದ ಭೂಮಿಯು ಹೆಚ್ಚು ಫಲವತ್ತೆಯನ್ನು ಕಾಣಬಹುದಾಗಿದೆ ಎಂದರು.
ಭೂಮಿ ಫಲವತ್ತತೆಯಾಗಿದ್ದರೆ ಹಿಪ್ಪುನೇರಳೆ ಎಲೆಗಳಲ್ಲಿ ಅಡ್ಡ ರೇಖೆಗಳು ಬರುತ್ತವೆ. ಹಿಪ್ಪುನೇರಳೆಯ ನೆತ್ತಿ ಸೊಪ್ಪನ್ನು ಕತ್ತರಿಸಿದರೆ ಮಾತ್ರ ಚಿಗುರು ಬರುತ್ತದೆ. ಭೂಮಿ ಫಲವತ್ತತೆಯಾಗಿದ್ದರೆ ಹಿಪ್ಪುನೇರಳೆಯ ನೆತ್ತಿ ಸೊಪ್ಪುಕತ್ತರಿಸದೆ ಇದ್ದರೂ ಸಹ ಹಿಪ್ಪುನೇರಳೆ ಸೊಪ್ಪಿನಲ್ಲಿ ಅಡ್ಡ ರೇಖೆಗಳನ್ನು ಕಾಣಬಹುದಾಗಿದೆ ಎಂದು ಹೇಳಿದರು.
ರೇಷ್ಮೆಯನ್ನು ಬೆಳೆಯಲು ತನ್ನದೇ ಆದಂತಹ ರೂಪುರೇಷೆಗಳಿವೆ. ಅವುಗಳನ್ನು ಸರಿಯಾಗಿ ತಿಳಿದುಕೊಂಡು ನಂತರದಲ್ಲಿ ರೇಷ್ಮೆಯನ್ನು ಬೆಳೆಯಲು ಪ್ರಾರಂಭಿಸಿ ಕಾಲಕಾಲಕ್ಕೆ ತಕ್ಕಂತೆ ಗೊಬ್ಬರಗಳನ್ನು ಸಿಂಪಡಿಸಿ ಸುರಕ್ಷಿತವಾಗಿ ಕಾಪಾಡಿದ್ದಲ್ಲಿ ರೇಷ್ಮೆಯನ್ನು ಬೆಳೆಸಿ ಉಳಿಸಿಕೊಂಡು ಹೋಗಬಹುದು ಎಂದು ರೈತರಿಗೆ ರೇಷ್ಮೆ ಬೆಳೆಯ ಬಗ್ಗೆ ಸಲಹೆ ನೀಡಿದರು.
ಮೀನು ತರಬೇತಿ ಕೇಂದ್ರದ ಉಪ ನಿರ್ದೇಶಕ ಡಾ. ಮಹದೇವ್ ರವರು ಮೀನುಗಾರಿಕೆ ಸಮಗ್ರ ಮೀನು ಕೃಷಿ ಸಂಬಂಧ ಉಪನ್ಯಾಸ ನೀಡಿ ರೈತರು ತರಕಾರಿ ಬೆಳೆಯುವ ಜೊತೆಗೆ ರೇಷ್ಮೆ, ಹೈನುಗಾರಿಕೆಗೆ ಒಳಗೊಂಡಂತೆ ಸಮಗ್ರ ಕೃಷಿಯನ್ನು ಮಾಡವುದರಿಂದ ಒಂದು ಬೆಳೆಯಿಂದ ನಷ್ಟವಾದರೆ ಮತ್ತೊಂದು ಬೆಳೆಯಲ್ಲಿ ಲಾಭಗಳಿಸಬಹುದು ಎಂದು ಹೇಳಿದರು.
ಮೀನು ಮಾರಾಟ ಮಾಡುವ ಮಧ್ಯವರ್ತಿಗಳನ್ನು ತಪ್ಪಿಸಲು ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಮೀನು ತಿನ್ನುವುದರಿಂದ ಮನುಷ್ಯನ ದೇಹದಲ್ಲಿ ಇರುವ ಕೆಟ್ಟ ಕೊಬ್ಬಿನಾಂಶವನ್ನು ಕಡಿಮೆ ಮಾಡುವ ಶಕ್ತಿ ಮೀನುಗಳಿಗೆ ಇದೆ ಎಂದರು.
ಹೆಚ್ಚಿನ ಜನರು ಮೀನು ತಿನ್ನಲು ಶುರುಮಾಡಿದ್ದಾರೆ. ಆದರೆ ಮೀನುಗಳನ್ನು ಹೆಚ್ಚು ಉತ್ಪಾದನೆ ಮಾಡುತ್ತಿಲ್ಲ.ಆಂಧ್ರಪ್ರದೇಶದ ಹಾಗೂ ರಾಜ್ಯ ಪ್ರದೇಶ ಗಳಿಂದ ಮೀನುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ನಮ್ಮ ದೇಶದಲ್ಲಿ ಮೀನುಗಳನ್ನು ಮಾರಟ ಮಾಡಿ ಲಾಭವನ್ನು ಪಡೆಯುತ್ತಿದ್ದಾರೆ ಎಂದರು.
ಮೀನು ಸಾಗಾಣಿಕೆ ಮಾಡುವುದು ಒಂದು ಉದ್ಯಮವಾಗಿದೆ. ಉತ್ತಮವಾದ ನೀರಾವರಿ ಭೂಮಿಯಲ್ಲಿ, ಕಪ್ಪು ಮತ್ತು ಕೆಂಪು ಮಣ್ಣಿನ ಭೂಮಿಯಲ್ಲಿ ಅಥವಾ ನೀರನ್ನು ಹಿಡಿದು ಇಟ್ಟು ಕೊಳ್ಳುವ ಭೂಮಿಯಲ್ಲಿ ಮೀನು ಸಾಕಾಣಿಕೆ ಮಾಡುಲು ಉತ್ತಮವಾದ ಸ್ಥಳವಾಗಿದೆ ಎಂದರು.
ಪಶು ವೈದ್ಯಾಧಿಕಾರಿ ಡಾ.ತ್ರಿನೇಶ್ ರವರಿಂದ ಕುರಿ ಮತ್ತು ಆಡು ಸಾಕಾಣಿಕೆಯಲ್ಲಿ ಆಧುನಿಕ ತಂತ್ರಜ್ಞಾನಗಳು ಕುರಿತು ಉಪನ್ಯಾಸ ನೀಡಿದರು.
ತಾಲ್ಲೂಕಿನ 7 ಪ್ರಗತಿ ಪರ ರೈತರಿಗೆ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರಧಾನ, ಆತ್ಮ ಯೋಜನೆಯಡಿ 2021-22 ನೇ ಸಾಲಿನ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿತರಣೆ ಮತ್ತು ಸನ್ಮಾನ ನಡೆಯಿತು.
ಇದೇ ಸಂದರ್ಭದಲ್ಲಿ ಕೃಷಿ, ರೇಷ್ಮೆ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಹಾಗೂ ಇನ್ನಷ್ಟು ಕೃಷಿಗೆ ಸಂಬಂಧಪಟ್ಟಂತಹ ವಿಷಯಗಳನ್ನು ಕೃಷಿ ತಜ್ಞರೊಂದಿಗೆ ಸಂವಾದ ಮಾಡಿ ರೈತರು ಸೂಕ್ತ ಮಾರ್ಗ ಸೂಚಿಗಳನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ನಿರ್ದೇಶಕ ವಿ.ಆರ್ ಅಶೋಕ್, ರೇಷ್ಮೆ ಇಲಾಖೆಯ ಉಪನಿರ್ದೇಶಕ ರಾಜಪ್ಪ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಆರ್.ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಗೆ ಚಾಲನೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್
“ಪಾರಂಪರಿಕ ಸೈಕಲ್ ಸವಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್

