ಮಂಡ್ಯ: ಭಾರೀ ಮಳೆಗೆ ಜನ-ಜಾನುವಾರು ತತ್ತರ, ಒಡೆದ ಕೆರೆ, ಪೊಲೀಸ್ ಠಾಣೆಯೂ ಜಲಾವೃತ

ಮಂಡ್ಯ: ಜಿಲ್ಲೆಯಲ್ಲಿ ಸುರಿದಂತ ಧಾರಾಕಾರ ಮಳೆಯಿಂದಾಗಿ ಭಾರೀ ಅವಾಂತರವೇ ಸೃಷ್ಠಿಯಾಗಿದೆ. ಜನ-ಜಾನುವಾರು ತತ್ತರಿಸಿ ಹೋಗುವಂತೆ ಆಗಿದೆ. ಅಲ್ಲದೇ ಕೆಲ ಗ್ರಾಮದಲ್ಲಿ ಕೆರೆ ಒಡೆದು ಬೆಳೆ ನಾಶವಾಗಿದ್ದರೇ, ರಸ್ತೆಗೆ ನೀರು ನುಗ್ಗಿ ಸಂಚಾರವೇ ಅಸ್ತವ್ಯಸ್ಥಗೊಂಡಿದೆ. ಇದಲ್ಲದೇ ಪೊಲೀಸ್ ಠಾಣೆಗೂ ನೀರು ನುಗ್ಗಿ ಜಲಾವೃತಗೊಂಡ ಘಟನೆಯೂ ನಡೆದಿದೆ.

ಧಾರಾಕಾರ ಮಳೆಗೆ ರಸ್ತೆಯೇ ಕೊಚ್ಚಿ ಹೋಗಿದೆ. ಮಂಡ್ಯ ತಾಲೂಕಿನ ಶಿವಳ್ಳಿ ಬಳಿ ಈ ಘಟನೆ ನಡೆದಿದೆ. ರಸ್ತೆಯ ಕೊರೆತದಿಂದಾಗಿ, ರಸ್ತೆ ಕೊಚ್ಚಿ ಹೋಗಿ ಶಿವಳ್ಳಿ ಕೆಬ್ಬಳ್ಳಿ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಅಪಾರ ಪ್ರಮಾಣದ ನೀರು‌ ನುಗ್ಗಿ ರೈತರ ಬೆಳೆ ನಾಶವಾಗಿದೆ.

ಇನ್ನೂ ರಾತ್ರಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಹಲವು ಗ್ರಾಮಗಳ ಜಮೀನು‌ ಜಲಾವೃತಗೊಂಡಿವೆ. ಕೆಆರ್‌ಪೇಟೆ ತಾಲೂಕಿನ ದೇವರಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ನೀರು ನುಗ್ಗಿದೆ. ಇದರ ಪರಿಣಾಮ ಬಾಳೆ, ಕಬ್ಬು,‌ ತೆಂಗು, ಅಡಿಕೆ ಸೇರಿದಂತೆ ಇತರೆ ಬೆಳೆಗಳು ಜಲಾವೃತಗೊಂಡಿವೆ. ಕೈಗೆ ಬಂದಂತ ಬೆಳೆ ಭಾರೀ ಮಳೆಯಿಂದಾಗಿ ಜಲಾವೃಗೊಂಡ ಪರಿಣಾಮ, ರೈತರು ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ.

ಕಳೆದ ಎರಡೂ ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಹೆದ್ದಾರಿ ಜಲಾವೃತಗೊಂಡಿದೆ. ಮಂಡ್ಯದ ಮದ್ದೂರು ಪಟ್ಟಣದ ಕೊಲ್ಲಿ ಸರ್ಕಲ್ ಬಳಿ ಘಟನೆ ನಡೆದಿದೆ. ಬೆಂಗಳೂರು ಮತ್ತು ಮೈಸೂರು ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದೆ. ದೇಶಹಳ್ಳಿ ಕೆರೆ ತುಂಬಿದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡ ಕಾರಣ, ಬೆಂಗಳೂರು ಕಡೆ ಸಂಚರಿಸುವ ಹೆದ್ದಾರಿ ಬಂದ್ ಆಗಿದೆ. ಬದಲಿ ಮಾರ್ಗ ಹಾಗೂ ಒನ್ ವೇ ನಲ್ಲೇ ವಾಹನಗಳ ಸಂಚಾರಿಸುತ್ತಿದ್ದಾರೆ.

ಮತ್ತೊಂದೆಡೆ ಮಂಡ್ಯ ಜಿಲ್ಲೆಯ ಮದ್ದೂರಿನ ಕೆಸ್ತೂರು ಪೊಲೀಸ್ ಠಾಣೆ ಭಾರೀ ಮಳೆಯಿಂದಾಗಿ ಜಲಾವೃತಗೊಂಡಿದೆ. ಮಳೆಯಿಂದಾಗಿ ಕರೆಯಂತಾದ ಪೊಲೀಸ್ ವಸತಿ ಗೃಹದ ಸುತ್ತ ಹಾವುಗಳು ಕಾಣಿಸಿಕೊಂಡಿವೆ. ಹಾವಿನ ಕಾಟದಿಂದಾಗಿ ಪೊಲೀಸ್ ವಸತಿ ಗೃಹದಲ್ಲಿನ ಕುಟುಂಬಗಳು ಭಯಪಡುವಂತೆ ಆಗಿದೆ. ಇದೀಗ ಹಾವುಗಳ ಕಡಿತರ ಭೀತಿಯಲ್ಲಿದ್ದಾರೆ.

ರಾತ್ರಿ ಸುರಿದ ಭಾರೀ‌ ಮಳೆಯಿಂದ ನಾಗಮಂಗಲ ತಾಲೂಕು ಬಿಂಡಿಗನವಿಲೆ ಹೋಬಳಿಯ ಕೆ. ಮಲ್ಲೇನಹಳ್ಳಿ ಗ್ರಾಮದಲ್ಲಿನ ಕೆರೆ ಒಡೆದು ಹೋಗಿದೆ. ಈ ಪರಿಣಾಮ ನೂರಾರು ರೈತರ ಜಮೀನಿಗೆ ನೀರು ನುಗ್ಗಿ ಬೆಳೆ ನಾಶಗೊಂಡಿದೆ. ಕೆರೆ ಒಡೆಯೋದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎನ್ನಲಾಗಿದ್ದು, ತಾಲೂಕು ಆಡಳಿತ ವಿರುದ್ಧ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇನ್ನೂ ಮಂಡ್ಯ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಚಂದಗಿರಿ ಕೊಪ್ಪಲು ಹಾಗೂ ಸುಬ್ಬನಕುಪ್ಪೆ ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚಂದಗಿರಿ ಕೊಪ್ಪಲು, ಸುಬ್ಬನಕುಪ್ಪೆ ಗ್ರಾಮಗಳು ಸಂಪರ್ಕ ಕಡಿತಗೊಂಡಿವೆ. ಈ ಎರಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ.

ಮತ್ತೊಂದೆಡೆ ಪ್ರವಾಹದಲ್ಲಿ ಸಿಲುಕಿದ ಜನ ಜಾನುವಾರುಗಳ ರಕ್ಷಣೆ ಕಾರ್ಯ ಮುಂದುವರೆದಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕೋಡಿಮಾರನಹಳ್ಳಿ ಬಳಿ ಘಟನೆ ನಡೆದಿದೆ. ಕೆರೆ ತುಂಬಿ ಹೆಚ್ಚಿನ ಪ್ರಮಾಣದ ನೀರು ಹರಿದು ಎರಡು ಮನೆಗಳು ಜಲಾವೃತಗೊಂಡಿವೆ. ಜಲಾವೃತವಾದ ಮನೆಯಲ್ಲಿದ್ದ 10 ಜನರು ಸೇರಿ ಜಾನುವರುಗಳ ರಕ್ಷಣೆ ಮಾಡಲಾಗಿದೆ. ಅಗ್ನಿಶಾಮಕ ಸಿಬ್ಬಂದಿಗಳ ಯಶಸ್ವಿ ಕಾರ್ಯಾಚರಣೆಯಲ್ಲಿ ರಕ್ಷಿಸಿದ್ದಾರೆ.

About The Author