Saturday, April 19, 2025

Latest Posts

Mandya : ಮಂಡ್ಯ ನಮ್ದೇ ; ದಳಪತಿ ರಿವರ್ಸ್ ಆಪರೇಷನ್

- Advertisement -

ಮಂಡ್ಯ ನಗರಸಭಾ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆ ಜೆಡಿಎಸ್ ನಾಯಕ ಹೆಚ್​.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯಾಗಿತ್ತು. ಚುನಾವಣೆಗೆ ಇನ್ನು ಕೆಲವು ದಿನ ಇರುವಾಗಲೇ ಆಪರೇಷನ್ ಹಸ್ತ ಮಾಡಿದ್ದ ಕಾಂಗ್ರೆಸ್, ಜೆಡಿಎಸ್​ನ ಎರಡು ಗಟ್ಟಿ ಕುಳಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. ಕಾಂಗ್ರೆಸ್ಸಿಗೆ ಸೆಡ್ಡು ಹೊಡೆದ ಕೇಂದ್ರ ಸಚಿವ ಕುಮಾರಸ್ವಾಮಿ, ರಿವರ್ಸ್ ಆಪರೇಷನ್ ಮಾಡಿ ಕಾಂಗ್ರೆಸ್ಸಿನ ಒಬ್ಬ ಸದಸ್ಯನನ್ನು ತೆಕ್ಕೆಗೆ ಹಾಕಿಕೊಂಡು, ನಗರಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಈ ಬಾರಿಯ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ಜಿದ್ದಾಜಿದ್ದಿ ಕಾರಣವಾಗಿತ್ತು. ನಗರಸಭೆಯಲ್ಲಿ ಜೆಡಿಎಸ್​ನ 18 ಸದಸ್ಯರಿದ್ದರೆ, ಕಾಂಗ್ರೆಸ್​​ನಿಂದ 10, ಪಕ್ಷೇತರರು 5 ಹಾಗೂ ಬಿಜೆಪಿಯಿಂದ 5 ಸದಸ್ಯರು ಸೇರಿ ಒಟ್ಟು 35 ಸದಸ್ಯರಿದ್ದಾರೆ. ಸಂಸದ ಹೆಚ್​ಡಿಕೆ ಹಾಗೂ ಶಾಸಕ ರವಿಕುಮಾರ್ ಗಣಿಗ ಮತವೂ ಸೇರಿ 37 ಸದಸ್ಯರಿದ್ದರು.

ನಗರಸಭೆಯ ಮಾಜಿ ಅಧ್ಯಕ್ಷರಾಗಿದ್ದ ಎಚ್.ಎಸ್. ಮಂಜು ಅವರು ಮತ್ತೊಮ್ಮೆ ಅಧ್ಯಕ್ಷ ಸ್ಥಾನವನ್ನು ಬಯಸಿ ಕಾಂಗ್ರೆಸ್ಸಿನಿಂದ ನಾಮಪತ್ರ ಸಲ್ಲಿಸಿದ್ರು. ಇದೇ ಸ್ಥಾನಕ್ಕೆ ಜೆಡಿಎಸ್​ ಪಕ್ಷದಿಂದ ನಾಗೇಶ್ ನಾಮಪತ್ರ ಸಲ್ಲಿಸಿದ್ರು. ಇನ್ನು, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ಸಿನಿಂದ ಜಾಕಿರ್ ಪಾಷ ಸ್ಪರ್ಧಿಸಿದ್ರೆ, ಬಿಜೆಪಿಯ ಅರುಣ್ ಕುಮಾರ್ ನಾಮಪತ್ರ ಸಲ್ಲಿಸಿದ್ದರು.

ಎನ್​ಡಿಎ ಮೈತ್ರಿಕೂಟದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಗೇಶ್ 19 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ರು. ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಮಂಜು ಅವರು 18 ಮತಗಳನ್ನು ಪಡೆದು ಸೋಲುಕಂಡರು. ಇನ್ನೂ ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದ ಬಿಜೆಪಿಯ ಅರುಣ್ ಕುಮಾರ್ 19 ಮತ, ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಜಾಕಿರ್ ಪಾಷ 18 ಮತ ಪಡೆದ್ರು.

ಚುನಾವಣೆ ಆರಂಭಕ್ಕೂ ಮುನ್ನವೇ ನಗರಸಭೆ ಮುಂದೆ ದೊಡ್ಡ ಹೈಡ್ರಾಮಾವೇ ನಡೀತು. ಸಚಿವ ಎಚ್.ಡಿ. ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ನಗರಸಭೆ ಹೊರಗೆ ಕಾಂಗ್ರೆಸ್ ಹಾಗೂ ಜೆಡಿಸ್ ಸದಸ್ಯರ ನಡುವೆ ಮಾತಿನ ಸಮರ ನಡೀತು. ಈ ವೇಳೆ ಪೊಲೀಸರು ಎಚ್.ಡಿ. ಕುಮಾರಸ್ವಾಮಿ ಅವರ ವಾಹನಕ್ಕೆ ಮಾತ್ರ ಒಳಗಡೆಗೆ ಅವಕಾಶ ಕಲ್ಪಿಸಿದ್ರು. ಇತ್ತ ಸದಸ್ಯರು ಆಗಮಿಸಿದ ಟಿಟಿ ವಾಹನಕ್ಕೆ ತಡೆ ಹಿಡಿಯಲಾಯಿತು.‌ ಕಾಂಗ್ರೆಸ್‌ ಸದಸ್ಯರ ವಾಹನವನ್ನೂ ಒಳಗಡೆ ಬಿಡದೆ ತಡೆಹಿಡಿದ್ರು. ಇತ್ತ ಜೆಡಿಎಸ್‌ನ ಸದಸ್ಯರ ವಾಹನವನ್ನೂ ಒಳ ಬಿಡದಂತೆ ಕಾಂಗ್ರೆಸ್ ಸದಸ್ಯರು ವಾಹನ ತಡೆದು ಆಕ್ರೋಶ ಹೊರಹಾಕಿದ್ರು. ಬಳಿಕ ಕುಮಾರಸ್ವಾಮಿ ಬಂದು ವಾಹನ ಬಿಡಿಸುವಲ್ಲಿ ಯಶಸ್ವಿಯಾದ್ರು.

ಒಟ್ನಲ್ಲಿ ನಗರಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ದಳಪತಿ ಕುಮಾರಸ್ವಾಮಿ, 1 ಮತದ ಅಂತರದಿಂದ ಗೆದ್ದುಬೀಗಿದ್ದಾರೆ. ಈ ಮೂಲಕ ಕಾಂಗ್ರೆಸ್​ಗೆ ತಿರುಗೇಟು ಕೊಟ್ಟಿದ್ದಾರೆ.

- Advertisement -

Latest Posts

Don't Miss