ಮಂಡ್ಯ : ದೇಶದ ಪ್ರತಿಷ್ಠಿತ ಹೆಚ್.ಎಂ.ಟಿ ಕಾರ್ಖಾನೆಯ ಪುನಶ್ಚೇತನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮುಂದಾಗಿದ್ದಾರೆ. ಇದೇ ವಿಚಾರವನ್ನಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಟೀಕಿಸಿದ್ದಾರೆ. ಈ ಇಬ್ಬರೂ ಸೇರಿ ರಿಯಲ್ ಎಸ್ಟೇಟ್ ಉದ್ಯಮ ನಡೆಸಲು ಮುಂದಾಗಿದ್ದಾರೆ ಎಂದು ಕಿಡಿ ಕಾರಿದ್ದರು.
ಆದರೆ ಸುರ್ಜೇವಾಲಾ ವಿರುದ್ಧ ಸಿಡಿದೆದ್ದಿರುವ ಜೆಡಿಎಸ್ ಶಾಸಕ ಹೆಚ್.ಟಿ. ಮಂಜು, ರಣದೀಪ್ ಸಿಂಗ್ ಸುರ್ಜೇವಾಲಾ ಒಬ್ಬ ಅಪ್ರಬುದ್ಧ ಹಾಗೂ ಅಜ್ಞಾನಿ ಎಂದು ವಾಗ್ದಾಳಿ ನಡೆಸಿದ್ದಾರೆ. ಮಂಡ್ಯದ ಕೆ.ಆರ್. ಪೇಟೆಯಲ್ಲಿ ಮಾತನಾಡಿರುವ ಅವರು, ರಾಜ್ಯ ಕಾಂಗ್ರೆಸ್ ಉಸ್ತುವಾರಿಯ ಟೀಕೆ ಅವೈಜ್ಞಾನಿಕ ಮತ್ತು ಅಪ್ರಬುದ್ದತೆಯಿಂದ ಕೂಡಿದೆ. ಇದು ಸುರ್ಜೇವಾಲಾ ಅವರ ಬೌದ್ದಿಕ ದಿವಾಳಿತನವನ್ನು ತೋರಿಸುತ್ತಿದೆ. ಇದನ್ನು ಜೆಡಿಎಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಅತ್ಯಂತ ಜನಜನಿತ ಕಾರ್ಖಾನೆಯ ಪುನರುಜ್ಜೀವನಕ್ಕೆ ಮುಂದಾಗಿರುವ ಪ್ರಧಾನಿ ಮೋದಿ ಹಾಗೂ ಕುಮಾರಸ್ವಾಮಿಯವರ ಕಾರ್ಯಕ್ಕೆ ಸಹಕಾರ ನೀಡಿ. ಹೀಗಂತಾ ರಾಜ್ಯ ಸರ್ಕಾರದ ಕಿವಿ ಹಿಂಡಿ ಎಂದು ತಿರುಗೇಟು ನೀಡಿದ್ದಾರೆ.
ಟೀಕಿಸುವ ಬದಲು ಸಹಕಾರ ನೀಡಲು ತಿಳಿಸಿ. ಹೆಚ್.ಎಂ.ಟಿ ಕಂಪನಿ 1961 ರಲ್ಲಿ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಪ್ರಧಾನ ಕಛೇರಿ ಹೊಂದಿದೆ. ಅಂದಿನ ಪ್ರದಾನಿ ಕಾಂಗ್ರೆಸ್ ಪಕ್ಷದ ಜವಾಹರ್ಲಾಲ್ ನೆಹರೂ ಅವರೇ ಬೆಂಗಳೂರಿಗೆ ಬಂದು ಈ ಘಟಕವನ್ನು ಉದ್ಘಾಟಿಸಿದ್ದಾರೆ. ಗಡಿಯಾರ, ಟ್ರ್ಯಾಕ್ಟರ್ ತಯಾರಿಕೆ, ಮುದ್ರಣ ಯಂತ್ರ, ಆಹಾರ ಸಂಸ್ಕರಣಾ ಯಂತ್ರಗಳು ಸೇರಿದಂತೆ ದೇಶದ ರಕ್ಷಣಾ ವಲಯಕ್ಕೆ ಬೇಕಾದ ಸಾಮಗ್ರಿಗಳನ್ನು ಉತ್ಪಾದಿಸುತ್ತದೆ. ಇಂತಹ ಪ್ರತಿಷ್ಠಿತ ಸರ್ಕಾರಿ ಸ್ವಾಮ್ಯದ ಹೆಚ್.ಎಂ.ಟಿ ದೇಶದಾದ್ಯಂತ 06 ಅಂಗ ಸಂಸ್ಥೆಗಳನ್ನು ಹೊಂದಿದೆ ಎಂದು ಶಾಸಕ ಮಂಜು ತಿಳಿಸಿದ್ದಾರೆ.
ಇನ್ನೂ 1980 ರಿಂದ 1990 ರ ನಡುವೆ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಅದಕ್ಷತೆಯ ಕಾರಣದಿಂದ ಹೆಚ್.ಎಂ.ಟಿ ಕಾರ್ಖಾನೆ ರೋಗಗ್ರಸ್ಥವಾಗಿತ್ತು. ಈ ಕಂಪನಿಯ ಕೆಲವು ಘಟಕಗಳು ಉತ್ಪಾದನೆಯನ್ನು ನಿಲ್ಲಿಸಿದ್ದರೂ ಕಂಪನಿಯ ಇತರ ಘಟಕಗಳು ಚಾಲ್ತಿಯಲ್ಲಿದ್ದು ರಕ್ಷಣಾ ಇಲಾಖೆಗೆ ಅಗತ್ಯವಾದ ಸಲಕರಣೆಗಳನ್ನು ಉತ್ಪಾದಿಸಿ ಪೂರೈಕೆ ಮಾಡುತ್ತಿದೆ. 2500 ಕಾರ್ಮಿಕರು ಇಂದಿಗೂ ಹೆಚ್.ಎಂ.ಟಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ರಾಜಕೀಯಕ್ಕಿಳಿದಿದೆ ಎಂದು ಹರಿಹಾಯ್ದಿದ್ದಾರೆ.