Mandya news:
ಮಂಡ್ಯ ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ಕಡಿಮೆಯಾಗುತ್ತಿದ್ದು, 2025 ವೇಳೆಗೆ ಮಲೇರಿಯಾ ಮುಕ್ತ ದೇಶವನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಮಲೇರಿಯಾ ರೋಗವನ್ನು ನಿಯಂತ್ರಿಸುವಲ್ಲಿ ಕಾರ್ಯ ಚಟುವಟಿಕೆಗಳು ನಡೆಯುತ್ತಿದ್ದು, ಜಿಲ್ಲೆಯಲ್ಲಿ 2023 ವೇಳೆಗೆ ಮಲೇರಿಯಾ ರೋಗವನ್ನು ಮುಕ್ತವಾಗಿಸುವ ಗುರಿ ಹೊಂದಿದೆ ಎಂದು ಡಿಹೆಚ್‍ಒ ಡಾ.ಟಿ.ಎನ್ ಧನಂಜಯ ರವರು ತಿಳಿಸಿದರು.
ನಗರದ ತಮಿಳು ಕಾಲೋನಿಯಲ್ಲಿ ಡಿಹೆಚ್‍ಒ ಡಾ.ಟಿ.ಎನ್ ಧನಂಜಯ ರವರು ವಿಶ್ವ ಸೊಳ್ಳೆಗಳ ದಿನಾಚರಣೆ ಪ್ರಯುಕ್ತ ಜಾಥಾ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ಒಂದು ಎರಡು ಬರುತ್ತಿದ್ದು, ಅತಿ ಹೆಚ್ಚು ಮಲೇರಿಯಾ ಪ್ರಕರಣಗಳು ಸ್ಲಂ, ಕೊಳಗೇರಿ, ಒಳಚರಂಡಿ ವ್ಯವಸ್ಥೆಯಲ್ಲಿ ಸ್ವಚ್ಛತೆ ಇಲ್ಲದೆ ಇರುವ ಪ್ರದೇಶದಲ್ಲಿ ಕಂಡುಬರುತ್ತದೆ. ಇದಕ್ಕೆ ಕಾರಣ ಈ ಸ್ಥಳಗಳಲ್ಲಿ ಹೆಚ್ಚು ಸೊಳ್ಳೆಗಳು ಉತ್ಪತ್ತಿಯಾಗುತ್ತವೆ.
ಮಲೇರಿಯಾ ಪ್ರಕರಣಗಳು ಕಂಡು ಬರುವ ಸ್ಥಳಗಳಲ್ಲಿ ಜಾಥಾ ಹಾಗೂ ಕರಪತ್ರಗಳ ಮುಖಾಂತರ ಜಾಗೃತಿಯನ್ನು ಮೂಡಿಸುವ ಮುಖಾಂತರ ತಿಳುವಳಿಕೆಯನ್ನು ನೀಡಬೇಕು ಎಂದರು.
ಮಲೇರಿಯಾ ದಂತಹ ಶಂಕಿತ ಜ್ವರ ಬಂದರೆ ರಕ್ತ ಪರೀಕ್ಷೆ ಮಾಡಿಸಲು ವಿಶೇಷ ಕ್ಯಾಂಪ್ ಮಾಡಲಾಗುತ್ತದೆ. ಸೊಳ್ಳೆಗಳು ಉತ್ಪತ್ತಿಯಾಗುವ ತಾಣಗಳನ್ನು ನಾಶ ಮಾಡಿದರೆ. ಸೊಳ್ಳೆಗಳು ತಾನಾಗಿಯೇ ನಾಶವಾಗುತ್ತವೆ. ಮನುಷ್ಯ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎನ್ ಆಶಾಲತಾ, ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕೆ.ಜಿ ಭವಾನಿಶಂಕರ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಆರ್ ಶಶಿಧರ್, ಕೀಟಶಾಸ್ತ್ರಜ್ಞರಾದ ಜಾನೆಟ್ ಮೆನೆಜಿಸ್, ಟಿಹೆಚ್‍ಒ ಡಾ.ಜವರೇಗೌಡ, ಆರೋಗ್ಯ ಶಿಕ್ಷಣಾಧಿಕಾರಿ ವೇಣುಗೋಪಾಲ್, ಮುಖಂಡರುಗಳಾದ ವಸಂತ್, ನಾಗಣ್ಣಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.