Manthralaya:
ದೇಶದ ವಿವಿದೆಡೆಯಿಂದ ಇಂದು ಮಂತ್ರಾಲಯದತ್ತ ಭಕ್ತರ ದಂಡೇ ಹರಿದು ಬರುತ್ತಿದೆ.ನವೀಕೃತ ಮೊಗಸಾಲೆ ಮತ್ತು ಸಾಲಾಂಕೃತ ಬೃಂದಾವನವನ್ನು ಅಚ್ಚರಿಯಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ ಭಕ್ತರು.
ಕರ್ನಾಟಕದ ಪ್ರಸಿದ್ದ ಯಾತ್ರಾ ಸ್ಥಳವಾದ ಮಂತ್ರಾಲಯದಲ್ಲಿ ಇಂದು[ಅಗಸ್ಟ್12] ಶುಭ ಶುಕ್ರವಾರದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ ಸಂಭ್ರಮದಿಂದ ನಡೆಯುತ್ತಿದೆ. ವಿವಿಧೆಡೆಗಳಿಂದ ಅಪಾರ ಭಕ್ತರು ಶ್ರೀಮಠಕ್ಕೆ ಅಗಮಿಸಿದ್ದು, ನವೀಕೃತ ಮೊಗಸಾಲೆ ಮತ್ತು ಸಾಲಂಕೃತ ಬೃಂದಾವನವನ್ನು ಭಕ್ತಿಯಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ.
ರಾಯರ 351ನೇ ಆರಾಧನಾ ಮಹೋತ್ಸವದ ಹಿನ್ನೆಲೆ ಇಂದು ರಾಯರ ಉತ್ಸವ ಮೂರ್ತಿಯಾಗಿ ಭಕ್ತರು ಶ್ರದ್ಧೆಯಿಂದ ಕಾಣುವ ಪ್ರಹ್ಲಾದ ರಾಜರ ರಜತ ಸಿಂಹ ವಾಹನೋತ್ಸವ ನಡೆಯಲಿದೆ.
ಪೂರ್ವಾರಾಧನೆಯ ಧಾರ್ಮಿಕ ವಿಧಿವಿಧಾನಗಳು ಈಗಾಗಲೆ ಆರಂಭವಾಗಿದ್ದು, ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ಪಾದುಕೆಗಳ ಪೂಜೆ, ಉತ್ಸವ ಮೂರ್ತಿಯ ಪಾದಪೂಜೆ, ಪಂಚಾಮೃತ ಅಭಿಷೇಕ, ರಾಯರಮಠದ ಪಟ್ಟದ ದೇವರಾದ ಮೂಲ ರಾಮದೇವರ ಪೂಜೆ, ರಾಯರ ಬೃಂದಾವನಕ್ಕೆ ಹೂ ಅಲಂಕಾರ, ಮಹಾಮಂಗಳಾತಿ, ರಜತ ಸಿಂಹವಾಹನೋತ್ಸವ ನಡೆಯಲಿರುವುದು. ಸಂಜೆಯ ನಂತರ ಯೋಗಿಂದ್ರ ಮಂಟಪದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಶ್ರೀಮಠದಿಂದ ಸನ್ಮಾನಿಸಿ ಪ್ರಶಸ್ತಿ ವಿತರಿಸಲಾಗುವುದು. ರಾಯರ ಮಠಕ್ಕೆ ಹರಿದು ಭಕ್ತರ ದಂಡು ಹರಿದು ಬರುತ್ತಿದೆ.
ಆರಾಧನೆ ಹಿನ್ನೆಲೆಯಲ್ಲಿ ಶ್ರೀಮಠದಿಂದ ಎರಡು ಹೊತ್ತು ಅನ್ನ ದಾಸೋಹಕ್ಕೆ ವ್ಯವಸ್ಥೆ ಮಾಡಲಾಗಿದೆ. ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು ನಿತ್ಯ ಸುಮಾರು 60 ಕ್ವಿಂಟಲ್ ಅಕ್ಕಿಯನ್ನು ಬೇಯಿಸಿ, ಅನ್ನ ಸಿದ್ಧಪಡಿಸಲಾಗುತ್ತಿದೆ.
ತುಂಗಭದ್ರೆಯಲ್ಲಿ ಪ್ರವಾಹ:
ಕರ್ನಾಟಕದ ಮಲೆನಾಡು ಭಾಗದಲ್ಲಿನ ಧಾರಾಕಾರ ಮಳೆಯಿಂದಾಗಿ ತುಂಗಭದ್ರಾ ನದಿ ನೀರಿನಲ್ಲಿ ಪ್ರವಾಹ ಹೆಚ್ಚಾಗುತ್ತಿದೆ. ನದಿತೀರದಲ್ಲಿದ್ದ ಗಂಗಮ್ಮ ದೇವಸ್ಥಾನ ಜಲಾವೃತಗೊಂಡಿದ್ದು, ಮಠದ ಸುತ್ತಲ ನದಿ ತೀರದಲ್ಲಿ ತೀವ್ರ ಎಚ್ಚರಿಕೆ ಇರಿಸಲಾಗಿದೆ. ಭಕ್ತರು ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಇಳಿಯಬಾರದು ಎಂದು ಎಚ್ಚರಿಸಲಾಗಿದೆ. ರಕ್ಷಣೆಗಾಗಿ ತೆಪ್ಪಗಳ ಜೊತೆಗೆ ಅಂಬಿಗರನ್ನು ನಿಯೋಜಿಸಲಾಗಿದೆ. ಮಂತ್ರಾಲಯ ಪೊಲೀಸರು, ಸ್ವಯಂಸೇವಕರು, ಮಂತ್ರಾಲಯ ಆಡಳಿತದ ಮಂಡಳಿಯ ಸೆಕ್ಯುರಿಟಿ ಗಾರ್ಡ್ಗಳನ್ನು ದಡದಲ್ಲಿ ನಿಯೋಜನೆ ಮಾಡಲಾಗಿದೆ. ಭಕ್ತರ ಸ್ನಾನಕ್ಕೆ ತಾತ್ಕಾಲಿಕವಾಗಿ ಸ್ನಾನಘಟ್ಟಗಳನ್ನು ನಿರ್ಮಿಸಲಾಗಿದೆ.ಭಕ್ತರು ಆತಂಕಪಡುವ ಅವಶ್ಯಕತೆ ಇಲ್ಲ, ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ ಎಂಬುದಾಗಿ ಆಡಳಿತ ಮಂಡಳಿ ತಿಳಿಸಿವೆ.




