ಕೆ ಆರ್ ಎಸ್ ಪ್ರೊಡಕ್ಷನ್ಸ್ ಚೊಚ್ಚಲ ಚಿತ್ರಕ್ಕೆ ಎಂಟ್ರಿ ಕೊಟ್ಟ ಮಾನ್ವಿತ ಕಾಮತ್ – ಲವ್ ಲಿ ಸ್ಟಾರ್ ಗೆ ಜೋಡಿಯಾದ ಟಗರು ಪುಟ್ಟಿ
‘ಟಗರು’ ಸಿನಿಮಾ ಮೂಲಕ ಅಪಾರ ಜನಪ್ರಿಯತೆ ಗಳಿಸಿಕೊಂಡಿರುವ ಮಾನ್ವಿತ ಕಾಮತ್ ಒಂದಿಷ್ಟು ಗ್ಯಾಪ್ ಬಳಿಕ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ವಿದ್ಯಾಭ್ಯಾಸದಿಂದಾಗಿ ಚಿತ್ರರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಟಗರು ಪುಟ್ಟಿ ಅಥರ್ವ ಆರ್ಯ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರದಲ್ಲಿ ಲವ್ ಲಿ ಸ್ಟಾರ್ ಗೆ ಜೋಡಿಯಾಗಿ ಮಾನ್ವಿತ ಕಾಮತ್ ಬಣ್ಣ ಹಚ್ಚುತ್ತಿದ್ದಾರೆ.
ತಂದೆ ಮಗನ ಸೆಂಟಿಮೆಂಟ್ ಕಥಾಹಂದರ ಒಳಗೊಂಡ ಕಂಟೆಂಟ್ ಬೇಸ್ಡ್ ಚಿತ್ರದಲ್ಲಿ ಲವ್ ಲಿ ಸ್ಟಾರ್ ಪ್ರೇಮ್ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಪ್ರೇಮ್ ಜೋಡಿಯಾಗಿ ಮಾನ್ವಿತಾ ಕಾಮತ್ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರೀಕರಣದಲ್ಲಿ ಮಾನ್ವಿತಾ ಭಾಗಿಯಾಗಿದ್ದು, ಇದೇ ಮೊದಲ ಬಾರಿಗೆ ಈ ಇಬ್ಬರ ಕಾಂಬಿನೇಶನ್ ತೆರೆ ಮೇಲೆ ಬರುತ್ತಿದೆ.‘ಕೆ ಆರ್ ಎಸ್ ಪ್ರೊಡಕ್ಷನ್ಸ್’ ನಿರ್ಮಾಣದಲ್ಲಿ ಬರ್ತಿರುವ ಮೊದಲ ಸಿನಿಮಾ ಇದಾಗಿದ್ದು, ಸದ್ಯದಲ್ಲೇ ಸಿನಿಮಾ ಟೈಟಲ್ ಚಿತ್ರತಂಡ ಅನೌನ್ಸ್ ಮಾಡಲಿದೆ. ‘ಜೂಟಾಟ’, ‘ಗುಬ್ಬಚ್ಚಿ’ ಸಿನಿಮಾ ನಿರ್ದೇಶಿಸಿರುವ ಅಥರ್ವ ಆರ್ಯ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೂರನೇ ಚಿತ್ರವಿದು. ತಂದೆಯ ಮಹತ್ವ ಸಾರುವ ಸಿನಿಮಾ. ಕುಟುಂಬದಲ್ಲಿ ಅಥವಾ ಸಮಾಜದಲ್ಲಿ ಆತ ಕಡೆಗಣನೆಗೆ ಒಳಗಾದಾಗ ಯಾವ ರೀತಿ ನೋವು ಅನುಭವಿಸುತ್ತಾನೆ ಅನ್ನೋದು ಚಿತ್ರದ ಒನ್ ಲೈನ್ ಕಹಾನಿ. ಚಿತ್ರದಲ್ಲಿ ತಬಲ ನಾಣಿ ತಂದೆ ಪಾತ್ರವನ್ನು ನಿರ್ವಹಿಸುತ್ತಿದ್ದು, ಈ ಚಿತ್ರದ ಮೂಲಕ ರಂಗಭೂಮಿ ಕಲಾವಿದರಾದ ಸಂಜಯ್ ಹಾಗೂ ಜೀವಿತ ವಸಿಷ್ಠ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.ಚಿತ್ರಕ್ಕೆ ನಾಗಾರ್ಜುನ ಆರ್ .ಡಿ ಕ್ಯಾಮೆರಾ ವರ್ಕ್, ಆಕಾಶ್ ಪರ್ವ ಸಂಗೀತ ನಿರ್ದೇಶನ, ವೇದಿಕ್ ವೀರ ಸಂಕಲನವಿದೆ. ಬಾಲ ರಾಜ್ವಾಡಿ, ಗಿರೀಶ್ ಜತ್ತಿ, ವಿಜಯ್ ಚೆಂಡೂರ್, ಅರುಣ ಬಾಲರಾಜ್ ಒಳಗೊಂಡ ತಾರಾಬಳಗವಿದೆ.