ದೆಹಲಿ ಕೆಂಪುಕೋಟೆ ಬಳಿಯ ಮೆಟ್ರೋ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಎರಡು ಕಾರುಗಳು ಸ್ಫೋಟಗೊಂಡ ಪರಿಣಾಮ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಮತ್ತು 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ.
ಸ್ಫೋಟದ ಪರಿಣಾಮ ಹತ್ತಿರ ನಿಂತಿದ್ದ 8 ಕಾರುಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ದೃಶ್ಯಾವಳಿಗಳು ನಡುಗಿಸುವಂತಿದ್ದು, ಹಲವರ ದೇಹಗಳು ಛಿದ್ರಗೊಂಡಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಫೋಟದ ತೀವ್ರತೆ ಇಷ್ಟರ ಮಟ್ಟಿಗೆ ಇತ್ತು ಅಂದರೆ, ದೂರದಲ್ಲಿದ್ದ ಕಟ್ಟಡಗಳ ಕಿಟಕಿಗಳ ಗಾಜುಗಳು ಸಹ ಚೂರುಚೂರಾಗಿವೆ.
ಪೊಲೀಸರು ಮತ್ತು ಭದ್ರತಾ ಪಡೆಗಳು ಕೂಡಲೇ ಸ್ಥಳಕ್ಕಾಗಮಿಸಿ ಪ್ರದೇಶವನ್ನು ಸುತ್ತುವರೆದಿವೆ. ಭಯೋತ್ಪಾದಕ ಕೃತ್ಯದ ಶಂಕೆ ವ್ಯಕ್ತವಾಗಿದ್ದು, ಎನ್‌ಐಎ (NIA) ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಹರ್ಯಾಣ ನೋಂದಣಿಯ ಇಕೋ ಕಾರು ಮೊದಲು ಸ್ಫೋಟಗೊಂಡಿದ್ದು, ಬಳಿಕ ಪಕ್ಕದ ಕಾರುಗಳು ಬೆಂಕಿಗೆ ಆಹುತಿಯಾದವು.
ಫರೀದಾಬಾದ್‌ನಲ್ಲಿ ಇತ್ತೀಚೆಗೆ ಪತ್ತೆಯಾದ ಸ್ಫೋಟಕ ವಸ್ತು ಪ್ರಕರಣದ ಬೆನ್ನಲ್ಲೇ ಈ ಘಟನೆ ನಡೆದಿರುವುದರಿಂದ, ತನಿಖಾ ಸಂಸ್ಥೆಗಳು ಶಂಕೆಗಳನ್ನು ಗಂಭೀರವಾಗಿ ಪರಿಗಣಿಸಿವೆ. ಒಟ್ಟು ಏಳು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದವು. ದೆಹಲಿಯಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ರಾಜಧಾನಿಯ ಪ್ರಮುಖ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

