ಬೆಂಗಳೂರಲ್ಲಿ ಬೃಹತ್ ಮುಸ್ಲಿಂ ಸಮಾವೇಶ – ಈದ್ & ಓಣಂ ಸಂಭ್ರಮ!

ಮುಸ್ಲಿಂರ ಪ್ರಮುಖ ಧಾರ್ಮಿಕ ಹಬ್ಬಗಳಲ್ಲಿ ಒಂದಾದ ಈದ್ ಮಿಲಾದ್ ಆಚರಣೆಗೆ ಬೆಂಗಳೂರು ನಗರ ಸಜ್ಜಾಗಿದೆ. ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದ ಅಂಗವಾಗಿ ನಗರದಾದ್ಯಂತ ಭಕ್ತಿಭಾವದಿಂದ ಹಬ್ಬದ ಆಚರಣೆ ನಡೆಯುತ್ತಿದೆ.

ಈ ಹಿನ್ನಲೆಯಲ್ಲಿ ಅರಮನೆ ಮೈದಾನದಲ್ಲಿ ಸೆಪ್ಟೆಂಬರ್ 5 ಮತ್ತು 6ರಂದು ಬೃಹತ್ ಧಾರ್ಮಿಕ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಬಾರಿ, ಇತ್ತೀಚಿನ ವರ್ಷಗಳಲ್ಲಿನಂತೆ ವಿಭಿನ್ನ ಪ್ರದೇಶಗಳಲ್ಲಿ ಅಲ್ಲದೆ, ಒಂದೇ ಸ್ಥಳದಲ್ಲಿ ಸಮಾವೇಶ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ದೇಶ–ವಿದೇಶಗಳಿಂದ ಬರುವ ಪ್ರಮುಖ ಮುಸ್ಲಿಂ ಧರ್ಮಗುರುಗಳು ಭಾಗವಹಿಸಲಿದ್ದಾರೆ ಎಂಬ ನಿರೀಕ್ಷೆ ಇದೆ.

ನಗರದ ಪ್ರಮುಖ ಮಸೀದಿಗಳಲ್ಲಿ ಈದ್ ಮಿಲಾದ್ ಅಂಗವಾಗಿ ವಿಶೇಷ ನಮಾಜ್ ಹಾಗೂ ಪ್ರಾರ್ಥನೆಗಳು ನಡೆಯುತ್ತಿವೆ. ಮುಸ್ಲಿಂ ಸಮುದಾಯದವರು ಮನೆ–ಮನೆಗಳಲ್ಲಿ ಹಬ್ಬದ ಅಂಗವಾಗಿ ಮಿಠಾಯಿಗಳ ವಿತರಣೆ, ಶರಬತ್ ಮತ್ತು ಫಲಾಹಾರಗಳ ಸೇವನೆ ಮಾಡುವ ಮೂಲಕ ಸಂತೋಷವನ್ನು ಹಂಚಿಕೊಳ್ಳುತ್ತಿದ್ದಾರೆ.

ಹಬ್ಬದ ಮುನ್ನ ದಿನದಂದು ಗಾಂಧಿನಗರದಲ್ಲಿ, ಸಾರ್ವಜನಿಕರಿಗೆ ಹಣ್ಣು, ಡ್ರೈ ಫ್ರೂಟ್ ಮತ್ತು ಶರಬತ್ ಹಂಚುವ ಮೂಲಕ ಹಬ್ಬದ ಆರಂಭಿಕ ಸಂಭ್ರಮ ಆಚರಿಸಲಾಯಿತು. ಬೆಂಗಳೂರಿನ 7 ಬಜಾರ್ ಪ್ರದೇಶದ ವ್ಯಾಪಾರಸ್ಥರು ಸೇರಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಆದರೆ ಕಾರ್ಯಕ್ರಮಕ್ಕೆ ಕೆಲವು ಹಿಂದೂಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಕಾನೂನು ಬಾಹ್ಯ ಚಟುವಟಿಕೆ ಏನೂ ನಡೆಯುವುದಿಲ್ಲ. ಎಲ್ಲವೂ ಕಾನೂನು ನಿಯಮಕ್ಕೆ ಒಳಪಟ್ಟು ಶಾಂತಿಯುತವಾಗಿ ನಡೆಯಲಿದೆ ಎಂದು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ಕೇರಳಿಗರ ಪ್ರಮುಖ ಹಬ್ಬ ಓಣಂ ಕೂಡ ಇದೇ ದಿನವಿದೆ. ಬೆಂಗಳೂರಿನಲ್ಲಿ ವಾಸವಿರುವ ಮಲಯಾಳಿ ಸಮುದಾಯದವರು ತಮ್ಮ ಮನೆಗಳಲ್ಲಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಮೂಲಕ ನಗರದಲ್ಲಿಂದು ಸಾಂಸ್ಕೃತಿಕ ವೈವಿಧ್ಯತೆಗೂ ಹೊಸತು ಕಂಡಿದ್ದು, ಶಾಂತಿ ಮತ್ತು ಸಹಿಷ್ಣುತೆಯೊಂದಿಗೆ ಹಬ್ಬ ಆಚರಣೆ ನಡೆಯುತ್ತಿದೆ.

ವರದಿ : ಲಾವಣ್ಯ ಅನಿಗೋಳ

About The Author