ಧ್ಯಾನ, ವ್ಯಕ್ತಿಯ ಮನಸ್ಸಿನ ತರಬೇತಿ ಹಾಗೂ ಅರಿವಿನ ಒಂದು ಕ್ರಮವನ್ನು ಉಂಟುಮಾಡುವ ಆಚರಣೆಯಾಗಿದೆ. ಧ್ಯಾನ ಎಂಬ ಪದವು ವಿವಿಧ ವಿಶಾಲ ಆಚರಣೆಗಳನ್ನು ಸೂಚಿಸುತ್ತದೆ. ಅದು ಕೆಲವು ತಂತ್ರಗಳನ್ನು ಒಳಗೊಂಡಿದ್ದು, ಅವು ವಿಶ್ರಾಂತಿ, ಆಂತರಿಕ ಶಕ್ತಿ ಅಥವಾ ಜೀವ ಶಕ್ತಿ ನಿರ್ಮಿಸುವ ತಂತ್ರಗಳಾಗಿವೆ. ಮತ್ತು ಪ್ರೀತಿ, ತಾಳ್ಮೆ, ಉದಾರತೆ ಮತ್ತು ಕ್ಷಮೆ ಇವುಗಳೂ ಕೂಡ ವಿಕಾಸವಾಗುತ್ತವೆ. ಧ್ಯಾನವು ಮನಸ್ಸಿನ ಏಕಾಗ್ರತೆಯಿಂದ ಮಾತ್ರ ಸಾಧ್ಯ.
ಧ್ಯಾನವನ್ನು ಒಬ್ಬ ವ್ಯಕ್ತಿಯ ಮನಸ್ಸಿನ ತರಬೇತಿ ಎಂದೇ ಕರೆಯಲಾಗುತ್ತದೆ. ಧ್ಯಾನ ಮಾಡುವುದರಿಂದ ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ, ಆಂತರಿಕ ಶಕ್ತಿಯನ್ನು ನಿರ್ಮಿಸುತ್ತದೆ. ಅಲ್ಲದೆ ಪ್ರೀತಿ, ತಾಳ್ಮೆ, ಉದಾರತೆ ಮತ್ತು ಕ್ಷಮೆ ಇವುಗಳನ್ನು ಉತ್ತೇಜಿಸಿ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡದಿಂದಾಗಿ ಸಮಯ ಸಾಕಾಗದೆ ಧ್ಯಾನ ಮಾಡುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಸಾಮಾನ್ಯವಾಗಿ ವರ್ಕೌಟ್ ಮೊರೆ ಹೋಗುವವರ ಸಂಖ್ಯೆಯೇ ಜಾಸ್ತಿ. ಹಾಗಾಗಿ ಯೋಗ ಅಥವಾ ಧ್ಯಾನ ಮಾಡುವವರು ಕಡಿಮೆ ಪ್ರಮಾಣದಲ್ಲಿದ್ದಾರೆ.
ಧ್ಯಾನವನ್ನು ಮಾಡುವುದರಿಂದ ಏನು ಲಾಭಗಳಿವೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಜೀವನದಲ್ಲಿ ಅನೇಕ ಸವಾಲುಗಳು ಎದುರಾಗುತ್ತದೆ. ಇದರಿಂದ ಮಾನಸಿಕವಾಗಿ ಅನೇಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಅಂತವರು ಪ್ರತಿನಿತ್ಯ ಧ್ಯಾನ ಮಾಡುವುದನ್ನು ರೂಢಿಸಿಕೊಂಡರೆ, ಒತ್ತಡವನ್ನು ನಿವಾರಿಸಬಹುದು. ಅದಷ್ಟೇ ಅಲ್ಲದೆ ಒತ್ತಡ ಹೆಚ್ಚಾದಂತೆ ಹೃದ್ರೋಗ, ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಮಧುಮೇಹದಂತಹ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.
ಧ್ಯಾನ ಮಾಡುವುದರಿಂದ ಚಿಂತೆಗಳನ್ನು ದೂರ ಮಾಡಿ ಶಾಂತ ಮನೋಭಾವನೆಯನ್ನು ಉತ್ತೇಜಿಸುತ್ತದೆ. ಮನಸ್ಸು ಮತ್ತು ಮೆದುಳು ಸರಿಯಾಗಿ ಕಾರ್ಯ ನಿರ್ವಹಿಸಲು ಧ್ಯಾನ ಸಹಾಯ ಮಾಡುತ್ತದೆ. 15 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ದಿನವೀಡಿ ಉಲ್ಲಾಸದಿಂದಿರಬಹುದು. ಹಾಗೂ ಧ್ಯಾನ ಮಾಡುವುದರಿಂದ ಅರಿವು, ಸ್ಪಷ್ಟತೆ ಮತ್ತು ಸಹಾನುಭೂತಿಯನ್ನು ಹೆಚ್ಚಿಸಿಕೊಳ್ಳಬಹುದು. ಅದಲ್ಲದೆ ಆಯುರ್ವೇದದ ಪ್ರಕಾರ, ಧ್ಯಾನವು ದೇಹದಲ್ಲಿ ಜೀವ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಜೀವ ಶಕ್ತಿಯ ಮಟ್ಟ ಹೆಚ್ಚಾದಂತೆ ಆತಂಕ ದೂರವಾಗುತ್ತದೆ. ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿರುವವರು ಧ್ಯಾನ ಮಾಡುವುದು ಉತ್ತಮ.
ಪ್ರತಿನಿತ್ಯ ಬೇಡದ ವಿಷಯಗಳಿಗೆ ಚಿಂತಿಸುವ ಕಾರಣ ಮೆದುಳಿಗೆ ಹೆಚ್ಚು ಕೆಲಸ ಕೊಟ್ಟಂತಾಗುತ್ತದೆ. ಮಾನಸಿಕ ಆರೋಗ್ಯ ಚೆನ್ನಾಗಿರಲು ಮೆದುಳಿನ ಆರೋಗ್ಯವನ್ನು ನೋಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಇನ್ನು ಗಮನವನ್ನು ಕೇಂದ್ರೀಕರಿಸಲು, ಉತ್ತಮವಾದ ನಿರ್ಧಾರವನ್ನು ತೆಗೆದುಕೊಳ್ಳಲು, ಕಲಿಕೆ, ಸ್ಮರಣೆಯನ್ನು ಹೆಚ್ಚಿಸಾಲು ಧ್ಯಾನ ಒಳ್ಳೆಯದು. ಒಟ್ಟಾರೆ ಧ್ಯಾನವು ಮಾನಸಿಕ ಸಮಸ್ಯೆಗಳಿಗೆ ಕಡಿವಾಣ ಹಾಕಿ, ಉತ್ತಮವಾದ ಅಲೋಚನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ