ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ (Channapatna By Election) ದಿನಾಂಕ ಇನ್ನೂ ನಿಗದಿ ಆಗಿಲ್ಲ. ಆದರೂ ಸಹ ಬಿಜೆಪಿ ಮತ್ತು ಜೆಡಿಎಸ್ ನಾಯಕರ ನಡುವೆ ಮೈತ್ರಿ ಟಿಕೆಟ್ ಫೈಟ್ ತೀವ್ರಗೊಂಡಿದೆ. ಶತಾಯಗತಾಯ ಮೈತ್ರಿ ಟಿಕೆಟ್ ಪಡೆಯಲು ಕಸರತ್ತು ನಡೆಸ್ತಿರೋ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (CP Yogeshwar) ತಮ್ಮ ಟಿಕೆಟ್ಗೆ ಅಡ್ಡಗಾಲು ಹಾಕುತ್ತಿರುವ ಎಚ್.ಡಿ.ಕುಮಾರಸ್ವಾಮಿ (HD Kumaraswamy)ಗೆ ಟಕ್ಕರ್ ಕೊಡಲು ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಮೊದಲು ಚುನಾವಣಾ ದಿನಾಂಕ ಘೋಷಣೆಯಾಗಲಿ ಆಮೇಲೆ ನಿರ್ಧರಿಸೋಣ ಅಂತ ಕೇಂದ್ರ ಸಚಿವ ಕುಮಾರಸ್ವಾಮಿ ಅವರೇನೋ ಪದೇ ಪದೇ ಹೇಳುತ್ತಿದ್ದಾರೆ. ಆದ್ರೆ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮೊದಲ ಆಯ್ಕೆ ಎನ್ನುತ್ತಿರುವ ಯೋಗೇಶ್ವರ್, ಪಕ್ಷೇತರರಾಗಿ ಸ್ಪರ್ಧಿಸುವ 2ನೇ ಆಯ್ಕೆಯನ್ನು ಇಟ್ಟುಕೊಂಡಿದ್ದಾರೆ. ಜೆಡಿಎಸ್ನ ಭದ್ರ ಬುನಾದಿ ಕ್ಷೇತ್ರವಾಗಿರೋ ಚನ್ನಪಟ್ಟಣವನ್ನ ಯಾವುದೇ ಕಾರಣಕ್ಕೂ ಬಿಟ್ಟು ಕೊಡದಿರಲು ಕುಮಾರಸ್ವಾಮಿ ನಿರ್ಧರಿಸಿದಂತಿದೆ. ಆದ್ರೆ, ದಳಪತಿಗೆ ಟಕ್ಕರ್ ಕೊಡಲು ರಣತಂತ್ರ ಹೆಣೆದಿರುವ ಸಿಪಿವೈ ತೆಗೆದುಕೊಳ್ಳೋ ನಿರ್ಧಾರ ಜೆಡಿಎಸ್ ಪಾಲಿಗೆ ನಿರ್ಣಾಯಕವಾಗಲಿದೆ ಎನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ.
ಮೈತ್ರಿ ಟಿಕೆಟ್ ಸಿಗದಿದ್ದರೆ ಪಕ್ಷೇತರರಾಗಿ ಕಣಕ್ಕಿಳಿಯಲು ನಿರ್ಧರಿಸಿರೋ ಯೋಗೇಶ್ವರ್ 3ನೇ ಪ್ಲ್ಯಾನ್ ಅನ್ನು ಕೂಡ ಸಿದ್ಧ ಮಾಡಿಕೊಂಡಿದ್ದಾರೆ. ಒಂದುವೇಳೆ ಪ್ರಬಲ ಸ್ಪರ್ಧೆ ನೀಡಲು ಕಷ್ಟ ಎಂಬ ಪರಿಸ್ಥಿತಿ ಎದುರಾದರೆ ಬಹುಜನ ಸಮಾಜ ಪಕ್ಷದಿಂದ ಟಿಕೆಟ್ ಪಡೆದು ಬೈ ಎಲೆಕ್ಷನ್ ಅಖಾಡಕ್ಕೆ ಧುಮುಕುವ ಆಯ್ಕೆಯನ್ನೂ ಯೋಗೇಶ್ವರ್ ಮುಕ್ತವಾಗಿ ಇಟ್ಟುಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ. ಈಗಾಗಲೇ ಬಿಎಸ್ಪಿ ನಾಯಕರ ಜೊತೆ ಒಂದು ಸುತ್ತಿನ ಮಾತುಕತೆಯನ್ನೂ ಕೂಡ ಯೋಗೇಶ್ವರ್ ನಡೆಸಿದ್ದಾರೆ.
ಮೈತ್ರಿ ಟಿಕೆಟ್ ಸಿಗಲಿ, ಬಿಡಲಿ ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ ಎಂದಿರೋ ಯೋಗೇಶ್ವರ್ ಸೈಲೆಂಟ್ ಆಗಿಯೇ ಮತ್ತೊಂದು ದಾಳ ಉರುಳಿಸಿದ್ದಾರೆ. ಅದೇನೆಂದರೆ ಜೆಡಿಎಸ್ ಚಿಹ್ನೆಯಡಿ ಬೇಕಾದರೂ ಸ್ಪರ್ಧೆಗೆ ನಾನು ಸಿದ್ಧ ಅಂತ ಯೋಗೇಶ್ವರ್ ಹೇಳಿರೋದು ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಮಧ್ಯೆ, ಚನ್ನಪಟ್ಟಣದಿಂದ ಮೈತ್ರಿ ಅಭ್ಯರ್ಥಿಯಾಗಿ ಯೋಗೇಶ್ವರ್ ಅವರನ್ನ ಕಣಕ್ಕಿಳಿಸಲು ರಾಜ್ಯ ಬಿಜೆಪಿ ನಾಯಕರು ಕುಮಾರಸ್ವಾಮಿ ಅವ್ರ ಮನವೊಲಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಆದರೆ, ಕುಮಾರಸ್ವಾಮಿಯವ್ರು ಮಾತ್ರ ಯೋಗೇಶ್ವರ್ ಮೊದಲು ಮೈತ್ರಿ ಧರ್ಮ ಪಾಲನೆ ಮಾಡ್ತೀನಿ ಅಂತ ಬಹಿರಂಗವಾಗಿ ಹೇಳಲಿ. ಆಮೇಲೆ ಟಿಕೆಟ್ ಕೊಡುವ ಬಗ್ಗೆ ನಿರ್ಧಾರ ಮಾಡುತ್ತೇವೆ ಅಂತ ಹೇಳಿದ್ದಾರೆ.