Saturday, July 5, 2025

Latest Posts

ಸರ್ಜಾ ಕುಟುಂಬದಲ್ಲಿ ಮತ್ತೆ ನಗು ಮೂಡಿಸಿದ ಮೇಘನಾ ರಾಜ್ ಸೀಮಂತ..!

- Advertisement -

ನಟ ಚಿರಂಜೀವಿ ಸರ್ಜಾ ನಮ್ಮನ್ನೆಲ್ಲಾ ಅಗಲಿ ಆಗ್ಲೇ ನಾಲ್ಕು ತಿಂಗಳು ಉರುಳಿವೆ.. ಆ ನೋವು ಅವರ ಕುಟುಂಬದವರಲ್ಲಿ ಹಾಗೂ ಚಿರು ಅಭಿಮಾನಿಗಳಲ್ಲಿ ಇನ್ನೂ ಮಾಸಿಲ್ಲ.. ಆದ್ರೆ ಸರ್ಜಾ ಕುಟುಂಬದಲ್ಲಿ ಚಿರಂಜೀವಿ ಸರ್ಜಾ ಅವರನ್ನ ಕಳೆದುಕೊಂಡ ನೋವಿನ ಕಾರ್ಮೋಡ ಕೊಂಚ ಸರಿದು, ಮತ್ತೆ ನಗು ಮೂಡಿದೆ.. ಅದಕ್ಕೆ ಕಾರಣವಾಗಿರೋದು ಸರ್ಜಾ ಕುಟುಂಬದ ಸೊಸೆ ನಟಿ ಮೇಘನಾ ರಾಜ್ ಅವರ ಸೀಮಂತ ಕಾರ್ಯಕ್ರಮ..

ಹೌದು, ಚಿರು ಅಗಲಿದ ಸಂದರ್ಭದಲ್ಲಿ ನಟಿ ಮೇಘನಾ ರಾಜ್ ಅವರು ಗರ್ಭಿಣಿಯಾಗಿದ್ರು.. ಹೊಟ್ಟೆಯಲ್ಲಿ ಮಗುವನ್ನ ಇಟ್ಕೊಂಡು, ಇನ್ನೊಂದೆಡೆ ಪತಿಯನ್ನ ಕಳೆದುಕೊಂಡಿದ್ದ ಮೇಘನಾ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಹಳಷ್ಟು ಕುಸಿದಿದ್ರು.. ಆದ್ರೆ ತಮ್ಮ ಕರುಳಿನ ಕುಡಿಗಾಗಿ ಮೇಘನಾ ಆ ದುಃಖದಿಂದ ಆದಷ್ಟು ಹೊರಬರುವ ಪ್ರಯತ್ನ ಮಾಡಿದ್ರು.. ಮೇಘನಾ ಅವರಷ್ಟೇ ಅಲ್ಲದೆ ಅವರ ಇಡೀ ಕುಟುಂಬ, ಆ ಮಗುವಿನ ನಿರೀಕ್ಷೆಯಲ್ಲಿ ತಮ್ಮ ನೋವನ್ನೆಲ್ಲಾ ಬದಿಗಿಟ್ಟು ಚೇತರಿಸಿಕೊಂಡಿದೆ.. ಸದ್ಯ ಮೇಘನಾ ಹಾಗೂ ಚಿರಂಜೀವಿ ಸರ್ಜಾ ಅವರ ಎರಡೂ ಕುಟುಂಬಗಳು ಸೇರಿ ಏಳು ತಿಂಗಳ ತುಂಬು ಗರ್ಭಿಣಿ ಮೇಘನಾ ಅವರ ಸೀಮಂತ ಕಾರ್ಯವನ್ನ ಶಾಸ್ತ್ರೋಕ್ತವಾಗಿ ನೆರವೇರಿಸಿದೆ.. 

ಸರ್ಜಾ ಹಾಗೂ ಮೇಘನಾ ಅವರ ಕುಟುಂಬಗಳಲ್ಲಿ ಬಹಳ ದಿನಗಳ ನಂತ್ರ ಮತ್ತೆ ಈಗ ಸಂತಸ ಮನೆ ಮಾಡಿದೆ.. ಗರ್ಭಿಣಿ ಮೇಘನಾ ಅವರಿಗೆ ಈ ದಿನಗಳು ಬಹಳ ಮುಖ್ಯವಾದದ್ದು.. ಈ ಸಮಯದಲ್ಲಿ ಅವರು ಹೆಚ್ಚು ಖುಷಿಯಾಗಿರ್ಬೇಕು.. ಹಾಗಾಗಿ ಚಿರು ದೈಹಿಕವಾಗಿ ಇಲ್ಲದಿದ್ರೂ ಕೂಡ, ಅವರ ಅನುಪಸ್ಥಿತಿಯ ನೋವು ಮೇಘನಾರನ್ನ ಕೊಂಚವೂ ಕಾಡದ ಹಾಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನೂ ಮಾಡಿ ಈ ಸೀಮಂತ ಕಾರ್ಯವನ್ನ ಮಾಡಿದ್ದಾರೆ ಕುಟುಂಬದವರು.. ಇನ್ನೂ ಈ ಸೀಮಂತ ಕಾರ್ಯದಲ್ಲಿ ಗರ್ಭಿಣಿ ಮೇಘನಾ ಅವರು ಹಸಿರು ಸೀರೆಯುಟ್ಟು, ಕೈ ತುಂಬ ಬಳೆಗಳನ್ನ ತೊಟ್ಟು ಬಹಳ ಸುಂದರವಾಗಿ ಕಂಗೊಳಿಸಿದ್ರು.. ವಿಶೇಷ ಅಂದ್ರೆ ಚಿರು ಇಲ್ಲ ಅನ್ನುವ ಭಾವನೆ ಮೂಡದ ಹಾಗೆ, ಚಿರಂಜೀವಿ ಸರ್ಜಾ ಅವರ ಉದ್ದದ ಕಟೌಟ್ ರೀತಿಯ ಚಿತ್ರವನ್ನ ಮೇಘನಾ ಅವರ ಪಕ್ಕದಲ್ಲಿ ನಿಲ್ಲಿಸಿ ಸೀಮಂತ ಕಾರ್ಯವನ್ನ ನಡೆಸಲಾಯ್ತು..

ಈ ಸೀಮಂತ ಕಾರ್ಯದಲ್ಲಿ ಮೇಘನಾರ ತಂದೆ-ತಾಯಿಗಳಾದ ಸುಂದರ್ ರಾಜ್, ಪ್ರಮೀಳಾ ಜೋಷಾಯಿ ಹಾಗೂ ಅವರ ಕುಟುಂಬದ ಆಪ್ತರು, ಜೊತೆಗೆ ಸರ್ಜಾ ಕುಟುಂಬದ ಎಲ್ಲಾ ಸದಸ್ಯರು ಅವರ ಆಪ್ತರು ಭಾಗಿಯಾಗಿದ್ರು.. ಇನ್ನೂ ಈ  ಶುಭ ಸಮಯದಲ್ಲಿ ಚಿತ್ರರಂಗದ ಸಾಕಷ್ಟು ಜನ ಕಲಾವಿದರು, ಗಣ್ಯರು ಮೇಘನಾರಿಗೆ ಶುಭ ಹಾರೈಸಿದ್ರು.. ಮೇಘನಾರ ಸೀಮಂತ ಕಾರ್ಯಕ್ರಮದ ಫೋಟೋಗಳು ಹಾಗೂ ವೀಡಿಯೋಗಳು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ವೈರಲ್ ಆಗಿವೆ.. ಚಿರು ಸರ್ಜಾ ಹಾಗೂ ಮೇಘನಾ ಇಬ್ಬರ ಅಭಿಮಾನಿಗಳು ಸೀಮಂತದ ಫೋಟೋಗಳು ಹಾಗೂ ವೀಡಿಯೋಗಳನ್ನ ನೋಡಿ ಖುಷಿ ಪಟ್ಟಿದ್ದು, ಶುಭಾಷಯಗಳನ್ನ ತಿಳಿಸಿದ್ದಾರೆ..

ಚಂದನ.ಎಸ್, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss