ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಮತ್ತೆ ದರ ಏರಿಕೆಯ ಬಿಸಿ ತಟ್ಟಲಿದೆ. ಇನ್ನೂ ಮೂರೇ ತಿಂಗಳಲ್ಲೇ, ಅಂದರೆ 2026ರ ಫೆಬ್ರವರಿಯಲ್ಲಿ, ಮತ್ತೆ ಮೆಟ್ರೋ ಟಿಕೆಟ್ ದರ 5% ರಷ್ಟು ಏರಿಕೆಯಾಗಲಿದೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.
ಪ್ರತಿ ವರ್ಷ ಫೆಬ್ರವರಿಯಲ್ಲಿ 5% ರಷ್ಟು ದರ ಏರಿಕೆ ಮಾಡುವ ಯೋಜನೆಗೆ ಬಿಎಂಆರ್‌ಸಿಎಲ್ ದರ ನಿಗದಿ ಸಮಿತಿ ಶಿಫಾರಸು ನೀಡಿದೆ. ಈ ಕ್ರಮ ಜಾರಿಗೆ ಬಂದರೆ, ಈಗಾಗಲೇ ದುಬಾರಿ ಎಂಬ ಖ್ಯಾತಿ ಪಡೆದಿರುವ ಬೆಂಗಳೂರು ಮೆಟ್ರೋ, ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಎನ್ನುವ ಹೆಸರನ್ನು ಮತ್ತಷ್ಟು ಬಲಪಡಿಸಲಿದೆ.
ಪ್ರಯಾಣಿಕರ ಆಕ್ರೋಶ ಈಗಾಗಲೇ ತೀವ್ರವಾಗಿದೆ. ಹಲವರು ಮೊದಲು ತಪ್ಪು ಲೆಕ್ಕ ಕೊಟ್ಟು ದರವನ್ನು ಹೆಚ್ಚಿಸಿ, ನಂತರ ಪ್ರತಿ ವರ್ಷ 5% ಹೆಚ್ಚಿಸುವುದು ನ್ಯಾಯವೇ? ಎಂದು ಪ್ರಶ್ನಿಸುತ್ತಿದ್ದಾರೆ. ಕಳೆದ ಫೆಬ್ರವರಿ 9ರಂದು ಬಿಎಂಆರ್‌ಸಿಎಲ್ ಒಂದು ದಿನದಲ್ಲಿ 105.5% ದರ ಏರಿಕೆ ಮಾಡಿತ್ತು. ಈ ಅಚ್ಚರಿಯ ಏರಿಕೆಗೆ ಸಾರ್ವಜನಿಕ ಆಕ್ರೋಶ ಉಂಟಾಗಿ, ನಂತರ ಅದನ್ನು 71.5% ಕ್ಕೆ ಇಳಿಸಲಾಯಿತು. ಆದರೆ, ಈ ಇಳಿಕೆಯಲ್ಲಿ ಕೂಡಾ ಲೆಕ್ಕದ ತಪ್ಪು ನಡೆದಿದೆ ಎಂಬ ಆರೋಪಗಳು ಮತ್ತೆ ಎದುರಾಗಿವೆ. ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡಲಾಗಿದೆ ಎಂಬುದನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಸ್ವತಃ ಬಹಿರಂಗಪಡಿಸಿದ್ದರು.
ಈ ವಿವಾದದ ನಡುವೆಯೇ, ಬಿಎಂಆರ್‌ಸಿಎಲ್ ಮತ್ತೊಂದು ದರ ಏರಿಕೆ ಯೋಜನೆ ಮುಂದಿಟ್ಟಿರುವುದು ಪ್ರಯಾಣಿಕರಲ್ಲಿ ಬೇಸರ ಹುಟ್ಟಿಸಿದೆ. ಜನರು ದರ ಏರಿಕೆಯ ಶಾಕ್‌ನಿಂದ ಇನ್ನೂ ಚೇತರಿಸಿಕೊಳ್ಳಲಿಲ್ಲ, ಮತ್ತೆ ಏರಿಕೆ ಅಂದ್ರೆ ಗಾಯದ ಮೇಲೆ ಬರೆ ಎಳೆದಂತೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಒಟ್ಟಿನಲ್ಲಿ, ಬಿಎಮ್‌ಆರ್‌ಸಿಎಲ್ ತಪ್ಪು ಲೆಕ್ಕದ ವಿವಾದದಿಂದ ಹೊರಬರದ ಮುನ್ನವೇ ಮತ್ತೊಂದು ದರ ಏರಿಕೆಗೆ ಸಜ್ಜಾಗಿದೆ. ಮೆಟ್ರೋ ಪ್ರಯಾಣ ಈಗ ಸುಲಭ ಸಾರಿಗೆ ಮಾರ್ಗಕ್ಕಿಂತ — ದುಬಾರಿ ಪ್ರಯಾಣದ ಭಾರವಾದ ಹೊರೆ ಆಗುತ್ತಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

