ಕಾಳೇನ ಅಗ್ರಹಾರ–ತಾವರೆಕೆರೆ ಗುಲಾಬಿ ಮಾರ್ಗದಲ್ಲಿ ಮೆಟ್ರೋ ಓಡಾಟ

ಬೆಂಗಳೂರು ಮೆಟ್ರೋ ಗುಲಾಬಿ ಮಾರ್ಗದ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ನಿರ್ಮಾಣವಾಗಿರುವ 7.3 ಕಿಲೋಮೀಟರ್ ಎತ್ತರಿಸಿದ ಮಾರ್ಗದಲ್ಲಿ ಮೆಟ್ರೋ ರೈಲಿನ ಪರೀಕ್ಷಾರ್ಥ ಸಂಚಾರ ಚುರುಕಾಗಿ ನಡೆಯುತ್ತಿದೆ. BEML ಒದಗಿಸಿರುವ ಪ್ರೊಟೋಟೈಪ್ ರೈಲನ್ನು ಬೆಳಗ್ಗೆ 9ರಿಂದ ಸಂಜೆ 7.30ರವರೆಗೆ ವಿವಿಧ ವೇಗಗಳಲ್ಲಿ ಸಂಚರಿಸಿ ತಪಾಸಣೆ ನಡೆಸಲಾಗುತ್ತಿದೆ.

ಈ ವೇಳೆ ಟ್ರಾಕ್ಷನ್ ಮತ್ತು ಬ್ರೇಕ್ ವ್ಯವಸ್ಥೆಗಳ ಕಾರ್ಯಕ್ಷಮತೆ, ರೈಲಿನ ಮೋಟಾರ್ ಹಾಗೂ ಪ್ರೊಪಲ್ಶನ್ ವ್ಯವಸ್ಥೆಯ ದಕ್ಷತೆ, ವಿದ್ಯುತ್ ಬಳಕೆ ಮತ್ತು ಬ್ರೇಕಿಂಗ್ ನಿಯತಾಂಕಗಳ ಮೌಲ್ಯಮಾಪನ ಮಾಡಲಾಗುತ್ತಿದೆ BMRCL ತಿಳಿಸಿದೆ. ಈ ಪ್ರಾಥಮಿಕ ಪರೀಕ್ಷಾರ್ಥ ಸಂಚಾರವನ್ನು ಫೆಬ್ರವರಿ 15ರವರೆಗೆ ಮುಂದುವರಿಸಲಾಗುತ್ತದೆ.

ಬಳಿಕ ಆಸಿಲೇಷನ್, ಸಿಗ್ನಲಿಂಗ್, ವಿದ್ಯುತ್ ಮತ್ತು ದೂರಸಂಪರ್ಕ ವ್ಯವಸ್ಥೆಗಳ ಸೇರಿದಂತೆ ಇನ್ನಿತರ ತಾಂತ್ರಿಕ ಪರೀಕ್ಷೆಗಳನ್ನು ಕೈಗೊಳ್ಳಲಾಗುವುದು. ಏಪ್ರಿಲ್ ಮಧ್ಯಭಾಗದವರೆಗೆ ಈ ಎಲ್ಲಾ ತಪಾಸಣೆಗಳನ್ನು ಪೂರ್ಣಗೊಳಿಸಿ ಸಮಗ್ರ ವರದಿ ಸಿದ್ಧಪಡಿಸಲಾಗುವುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಗುಲಾಬಿ ಮಾರ್ಗದ ಕಾಳೇನ ಅಗ್ರಹಾರದಿಂದ ನಾಗವಾರವರೆಗೆ ಒಟ್ಟು 21.56 ಕಿಲೋಮೀಟರ್ ಉದ್ದದ ಮೆಟ್ರೋ ಮಾರ್ಗ ನಿರ್ಮಾಣ ಕಾರ್ಯವನ್ನು ಐದು ಪ್ಯಾಕೇಜ್‌ಗಳಲ್ಲಿ ಕೈಗೊಳ್ಳಲಾಗಿದೆ. ಇದರಲ್ಲಿ 7.5 ಕಿಲೋಮೀಟರ್ ಎತ್ತರಿಸಿದ ಮಾರ್ಗ ಮತ್ತು ಸುಮಾರು 13 ಕಿಲೋಮೀಟರ್ ಸುರಂಗ ಮಾರ್ಗ ಒಳಗೊಂಡಿದೆ. ಈ ಮಾರ್ಗದಲ್ಲಿ ಒಟ್ಟು 17 ನಿಲ್ದಾಣಗಳು ಇರಲಿವೆ.

ಕಾಳೇನ ಅಗ್ರಹಾರ–ತಾವರೆಕೆರೆ ನಡುವಿನ ಎತ್ತರಿಸಿದ ಮಾರ್ಗದ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿರುವುದರಿಂದ, ಇದೀಗ ಈ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತಿದೆ. ಈ ವಿಭಾಗದಲ್ಲಿ ಒಟ್ಟು ಐದು ಮೆಟ್ರೋ ನಿಲ್ದಾಣಗಳಿವೆ.

ವರದಿ : ಲಾವಣ್ಯ ಅನಿಗೋಳ

About The Author