Friday, April 25, 2025

Latest Posts

ಸದನದಲ್ಲಿ ಮಂಡನೆಯಾಯ್ತು ಮೈಕ್ರೋ ಫೈನಾನ್ಸ್‌ ಮಸೂದೆ.. ಸಾಲಗಾರರಿಗೆ ಕಿರುಕುಳ ನೀಡಿದ್ರೆ ಕಠಿಣ ಕ್ರಮ..!

- Advertisement -

Bengaluru News: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ ವಸೂಲಾತಿ ಬಲವಂತದ ಕ್ರಮಗಳ ಪ್ರತಿಬಂಧಕ ವಿಧೇಯಕ-2025 ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಈ ವಿಧೇಯಕದಂತೆ ಇನ್ಮುಂದೆ ಬಲವಂತವಾಗಿ ಸಾಲ ವಸೂಲಿಗೆ ಇಳಿದ್ರೇ ಸಾಲ ಮನ್ನಾ ಮಾಡುವಂತ ನಿರ್ಧಾರವನ್ನು ಸರ್ಕಾರ ಕೈಗೊಳ್ಳುವುದಕ್ಕೆ ಅವಕಾಶವಿದೆ.

ಇನ್ನೂ ಈ ವಿಧೇಯಕದಡಿ ಅನಧಿಕೃತ ಹಾಗೂ ನೋಂದಾಯಿತವಲ್ಲದ ಮೈಕ್ರೋ ಫೈನಾನ್ಸ್ ಅಥವಾ ಲೇವಾದೇವಿದಾರರು ಸಾಲಗಾರನಿಂದ ಬಲವಂತದ ವಸೂಲಿ ಮಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಸಾಲ ಪಡೆದಿರುವ ಸಮಾಜದ ದುರ್ಬಲ ವರ್ಗದವರ ಬಳಿ ಬಲವಂತ ಮಾಡಿ ಹಣ ವಸೂಲಿಗೆ ಮುಂದಾದರೆ ಸಾಲ ಹಾಗೂ ಬಡ್ಡಿ ಎರಡೂ ಮನ್ನಾ ಆಗಿದೆ ಎಂದು ಭಾವಿಸಬೇಕು ಎಂಬ ಮಹತ್ವದ ಅಂಶವನ್ನು ವಿಧೇಯಕದಲ್ಲಿ ಅಳವಡಿಸಲಾಗಿದೆ.

ಇಷ್ಟೇ ಅಲ್ಲದೆ ಈ ರೀತಿಯ ಸಂಸ್ಥೆ ಅಥವಾ ಲೇವಾದೇವಿದಾರ ಸಾಲ, ಬಡ್ಡಿ ವಸೂಲಿಗೆ ದಾಖಲಿಸುವ ಯಾವುದೇ ದಾವೆ ಅಥವಾ ವ್ಯವಹಾರವನ್ನು ನ್ಯಾಯಾಲಯಗಳು ಪುರಸ್ಕರಿಸಬಾರದು. ಸಾಲಗಾರ ಅಥವಾ ಆತನೊಂದಿಗೆ ಯಾರ ವಿರುದ್ಧವಾದರೂ ಜಂಟಿಯಾಗಿ ದಾವೆ ಹೂಡಿದ್ದರೇ ತಕ್ಷಣದಿಂದಲೇ ಅದು ರದ್ದಾಗಬೇಕು. ಇನ್ನೂ ಯಾವುದೇ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಕಿರುಸಾಲಕ್ಕೆ ಅಡಮಾನ ಇಟ್ಟುಕೊಂಡಿದ್ದರೇ ಅಂತಹ ಆಸ್ತಿ, ವಸ್ತುಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬುದಾಗಿ ವಿಧೇಯಕವು ಸ್ಪಷ್ಟಪಡಿಸಿದೆ.

ಅಂದಹಾಗೆ ಸಾಲಗಾರ ಅಥವಾ ಸಾಲ ನೀಡಿರುವವರು ವಸೂಲಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ನೀಡಲು ಮುಂದಾದರೆ ಅದನ್ನು ಪೊಲೀಸರು ಸ್ವೀಕರಿಸಬೇಕು. ಒಂದು ವೇಳೆ ಆ ಪ್ರಕರಣದಲ್ಲಿ ಕಿರುಕುಳ ಸಾಬೀತಾದರೆ ಶಿಕ್ಷೆಯಾಗಬೇಕು ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ರಾಜ್ಯದಲ್ಲಿ ಹಣದ ವ್ಯವಹಾರ ನಡೆಸುವ ಯಾವುದೇ ಫೈನಾನ್ಸ್‌ ಕಂಪನಿಯು ಕಡ್ಡಾಯವಾಗಿ ನೋಂದಣಿ ಪ್ರಾಧಿಕಾರದ ಬಳಿ ರಿಜಿಸ್ಟರ್‌ ಮಾಡಿಸಿಕೊಂಡು ಪರವಾನಗಿ ಪಡೆದಿರಬೇಕು ಎಂದು ನೂತನ ವಿಧೇಯಕದಲ್ಲಿ ತಿಳಿಸಲಾಗಿದೆ.

ರಾಜ್ಯಪಾಲರು ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದರು..

ಇನ್ನೂ ಪ್ರಮುಖವಾಗಿ ರಾಜ್ಯಾದ್ಯಂತ ಕಳೆದೆರಡು ತಿಂಗಳುಗಳಿಂದ ಮೈಕ್ರೋ ಫೈನಾನ್ಸ್‌ಗಳ ಕಿರುಕುಳದಿಂದ ಅನೇಕ ಜನರು ಆತ್ಮಹತ್ಯೆ ಮಾಡಿಕೊಂಡು ತಮ್ಮ ಜೀವಗಳನ್ನು ಕಳೆದುಕೊಂಡಿದ್ದಾರೆ. ಆರ್ಥಿಕ ದುರ್ಬಲತೆಯ ಕಾರಣಕ್ಕೆ ತಾವು ಪಡೆದ ಸಾಲಕ್ಕೆ ನಿಗದಿತ ವೇಳೆಯಲ್ಲಿ ಬಡ್ಡಿ ಕಟ್ಟುವಲ್ಲಿ ವಿಳಂಬವಾದ ಹಿನ್ನೆಲೆ ಫೈನಾನ್ಸ್‌ಗಳು ಸಾಲಗಾರರಿಗೆ ತೊಂದರೆ ನೀಡುತ್ತಿದ್ದ ಘಟನೆಗಳು ಮುಂದುವರೆದಿದ್ದವು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರವು ಸುಗ್ರೀವಾಜ್ಞೆಯ ಮೂಲಕ ಮೈಕ್ರೋ ಫೈನಾನ್ಸ್ ಹಾವಳಿಯನ್ನು ತಗ್ಗಿಸಿ ಜನರ ಜೀವ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿತ್ತು.ಇದಕ್ಕೆ ಕಳೆದ ಫೆಬ್ರವರಿ 12 ರಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಅಂಕಿತ ಹಾಕಿದ್ದರು. ಇದರ ಬೆನ್ನಲ್ಲಿಯೇ ರಾಜ್ಯ ಸರ್ಕಾರದಿಂದ ಕರ್ನಾಟಕ ರಾಜ್ಯಪತ್ರದ ಮೂಲಕ ಆದೇಶವನ್ನು ಹೊರಡಿಸಲಾಗಿತ್ತು. ಇನ್ನೂ ಇದರ ಮುಂದುವರೆದ ಭಾಗವಾಗಿ ಸುಗ್ರೀವಾಜ್ಞೆಯು ಉತ್ತಮ ಉದ್ದೇಶಗಳನ್ನು ಹೊಂದಿದ್ದರೂ ಸಹ ಕಾನೂನು ಮತ್ತು ಸಾಮಾಜಿಕ ಪರಿಣಾಮವನ್ನು ಎರಡೂ ಸದನಗಳಲ್ಲಿ ವಿವರವಾಗಿ ಚರ್ಚಿಸಬೇಕಾಗಿತ್ತು. ಸದನವು ಈ ವಿಚಾರದ ಬಗ್ಗೆ ಚರ್ಚೆ ಮಾಡಲು ಸೂಕ್ತ ವೇದಿಕೆಯಾಗಿದೆ. ಸುಗ್ರೀವಾಜ್ಞೆಯನ್ನು ಜಾರಿಗೊಳಿಸುವ ಸಮಯದಲ್ಲಿ ಈ ಸಲಹೆಗಳನ್ನು ಪಾಲಿಸುವುದು ಅಗತ್ಯವೆಂದು ಈ ಹಿಂದೆ ಹೇಳಲಾಗಿತ್ತು. ಅದರಂತೆ ಈ ಕುರಿತು ಸದನದಲ್ಲಿ ಮಹತ್ವದ ಚರ್ಚೆಯಾಗುವ ಮೂಲಕ ನೂತನ ವಿಧೇಯಕ ಮಂಡನೆಯಾಗಿದೆ.

- Advertisement -

Latest Posts

Don't Miss