www.karnatakatv.net: ಕನ್ನಡಕ್ಕಾಗಿ ನಾವು ಎಂಬ ಅಭಿಯಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 1 ವಾರ ಆಯೋಜಿಸಲಾಗಿದ್ದು ಇಂದು ಬೆಳಿಗ್ಗೆ 11 ಗಂಟೆಗೆ ನಾಡಿನಾದ್ಯಂತ ಲಕ್ಷಾಂತರ ಜನರು ಏಕಕಾಲದಲ್ಲಿ ಕನ್ನಡ ಗೀತಗಾಯನ ನಡೆಸಿದರು.
ಹುಬ್ಬಳ್ಳಿಯ ಕನ್ನಡ ಭವನದಲ್ಲಿ ಲಕ್ಷ ಕಂಠಗಳ ಗೀತ ಗಾಯನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಹಾಗೇ ವಿಧಾನಸೌಧದ ಮೆಟ್ಟಿಲು ಬಳಿ ಮುಖ್ಯ ಕಾರ್ಯಕ್ರಮ ನಡೆಯಿತು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಸುನಿಲ್ ಕುಮಾರ್, ಶಾಸಕ ಸುನಿಲ್ ನಾಯಕ್, ಐಎಎಸ್, ಐಪಿಎಸ್ ಅಧಿಕಾರಿಗಳು ಪಾಲ್ಗೊಂಡಿದ್ದರು. ಬೆಂಗಳೂರಿನ ಪುರಭವನ, ರವೀಂದ್ರ ಕಲಾಕ್ಷೇತ್ರ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಕಚೇರಿಗಳು, ರೈಲು ನಿಲ್ದಾಣ, ಖಾಸಗಿ ಸಂಸ್ಥೆಗಳು, ಶಾಲಾ ಕಾಲೇಜುಗಳಲ್ಲೂ ಗಾಯನ ನಡೆಯಿತು. ನಂತರ ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’, ನಿಸಾರ್ ಅಹಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳನ್ನು ಹಾಡಿದರು.
ಈ ಹಾಡಿನ ಜತೆಗೆ ನಾಡಗೀತೆಯನ್ನು ಸಹ ಹಾಡಲಾಯಿತು. ವಿಧಾನಸೌಧದಲ್ಲಿ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಅಧಿಕಾರಿಗಳು ರಮ್ಯ ವಸಿಷ್ಠ ನೇತೃತ್ವದಲ್ಲಿ ಹಾಡಿದರು. ಇದೇ ರೀತಿ ರಾಜ್ಯಾದ್ಯಂತ ಗೀತಗಾಯನ ನಡೆಯಿತು. ಗಾಯನದ ನಂತರ ಕಾರ್ಯಕ್ರಮದಲ್ಲಿ “ಕನ್ನಡದಲ್ಲೇ ಮಾತನಾಡುವ, ಬರೆಯುವ…” ಸಂಕಲ್ಪ ಸ್ವೀಕರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಆಯೋಜಿಸಿರುವ ಏಕಕಾಲ ಗೀತ ಗಾಯನ ಕಾರ್ಯಕ್ರಮ ರಾಜ್ಯದಲ್ಲಿ ಒಂದು ವಾರ ಕಾಲ ನಡೆಯಲಿದ್ದು, ಮೂರು ಕನ್ನಡ ಗೀತೆಗಳನ್ನು ಹಾಡಿಸುವ ಹೊಣೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೊತ್ತಿಕೊಂಡಿದೆ.