ಬೆಂಗಳೂರು: ಸೈಬರ್ ಸುರಕ್ಷತಾ ಕೇಂದ್ರವಾದ ಸೈಬರ್ ವರ್ಸ್ ಫೌಂಡೇಷನ್ ನ ಲಾಂಛನ ಅನಾವರಣ ಮತ್ತು ಅಂತರ್ಜಾಲ ತಾಣದ ಉದ್ಘಾಟನೆಯನ್ನು ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಗುರುವಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಚಿವರು ಮಾತನಾಡಿ, ಮೈಸೂರು ನಗರವನ್ನು ಸೈಬರ್ ಸುರಕ್ಷತಾ ವಲಯನ್ನಾಗಿ ಬೆಳೆಸುವ ಉದ್ದೇಶದೊಂದಿಗೆ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಪಾಲುದಾರಿಕೆಯೊಂದಿಗೆ ಭೇರುಂಡ ಪ್ರತಿಷ್ಠಾನವು ಸೈಬರ್ ವರ್ಸ್ ಅನ್ನು ಸ್ಥಾಪಿಸಿದೆ ಎಂದರು.
ಸೈಬರ್ ಸುರಕ್ಷತೆಗೆ ಸಂಬಂಧಿಸಿದಂತೆ ಸಾಮರ್ಥ್ಯ ವೃದ್ಧಿ, ತರಬೇತಿ, ಪ್ರತ್ಯನುಕರಣೆ, ಸಂಶೋಧನೆ ಹಾಗೂ ಅಭಿವೃದ್ಧಿ, ಸೈಬರ್ ಸುರಕ್ಷಾ ತಜ್ಞರ ಸೃಷ್ಟಿ ಮೂಲಕ ಕರ್ನಾಟಕ ರಾಜ್ಯವನ್ನು ಸೈಬರ್ ಸುರಕ್ಷಾ ಪ್ರತಿಭೆಗಳ, ನಾವೀನ್ಯತೆಗಳ ಹಾಗೂ ಸಂಶೋಧನೆಗಳ ಕೇಂದ್ರನೆಲೆಯಾಗಿಸುವ ಗುರಿಯನ್ನು ಇದು ಹೊಂದಿದೆ ಎಂದು ಅಶ್ವತ್ಥನಾರಾಯಣ ವಿವರಿಸಿದರು.
ಮೈಸೂರಿನಲ್ಲಿ ಸೈಬರ್ ವರ್ಸ್ ಉತ್ಕೃಷ್ಠತಾ ಕೇಂದ್ರವು 4,000 ಚದುರ ಅಡಿಗಿಂತ ಹೆಚ್ಚಿನ ಜಾಗದಲ್ಲಿ ನೆಲೆಯಾಗಿದೆ. ಇಲ್ಲಿ 50 ವಿದ್ಯಾರ್ಥಿಗಳಿಗೆ 200ಕ್ಕೂ ಹೆಚ್ಚು ಸೈಬರ್ ಸುಕಕ್ಷತಾ ಸನ್ನಿವೇಶಗಳಲ್ಲಿ ಪ್ರಾಯೋಗಿಕ ತರಬೇತಿ ಕೊಡಲು ಅನುವು ಮಾಡಿಕೊಡುವ ಫಿಜಿಟಲ್ ಲ್ಯಾಬ್ ಇದೆ. ನವೋದ್ಯಮಗಳಿಗೆ ತಮ್ಮ ಉತ್ಪನ್ನಗಳ ಸದೃಢತೆಯನ್ನು ಹಾಗೂ ಸೇವೆಗಳ ಗುಣಮಟ್ಟವನ್ನು ಪರೀಕ್ಷಿಸಿಕೊಳ್ಳಲು ಸಹಕಾರಿಯಾಗುವ 15 ಲಕ್ಷ ಮಾಲ್ವೇರ್ ಗಳನ್ನು ಕೂಡ ಇದು ಒಳಗೊಂಡಿದೆ.
ಮೈಸೂರು ರಾಜವಂಶಸ್ಥ ಯದುವೀರ್ ಕೆ.ಸಿ.ಒಡೆಯರ್, ಅವರ ಪತ್ನಿ ತ್ರಿಷಿಕಾ ಕುಮಾರಿ, ಕಾಂತರಾಜ ಅರಸ್, ಪದ್ಮ ಪ್ರಸಾದ್ ಎಸ್., ಡಾ.ಆರ್.ಅಂಬರೀಷ್, ಗ್ರೂಪ್ ಕ್ಯಾಪ್ಟನ್ ಆನಂದ ನಾಯ್ಡು ಪಿ ಮತ್ತಿತರರು ಇದ್ದರು.