ಬೆಂಗಳೂರು: ಸರ್ಕಾರ ಉಳಿಸಿಕೊಳ್ಳೋದಕ್ಕಾಗಿ ಅತೃಪ್ತರ ಮನವೊಲಿಸಲು ಫ್ಲಾಪ್ ಆಗಿರೋ ದೋಸ್ತಿ ಇದೀಗ ಬಿಟ್ಟ ಬಾಣವನ್ನೇ ಮತ್ತೆ ಬಿಟ್ಟು ಮುಂಬೈ ಸೇರಿರುವ ಶಾಸಕರಿಗೆ ಕಡೇ ಎಚ್ಚರಿಕೆ ನೀಡಿದೆ. ಮೈತ್ರಿ ನಾಯಕರ ಬಿಟ್ಟ ಅನರ್ಹತೆ ಅಸ್ತ್ರಕ್ಕೆ ಕ್ಯಾರೇ ಎನ್ನದ ಅತೃಪ್ತರ ಮೇಲೆ ಮತ್ತದೇ ಬಾಣ ಬಿಡುವ ಮೂಲಕ ದೋಸ್ತಿ ತನ್ನ ಅಸಹಾಯಕತೆ ಪ್ರದರ್ಶಿಸಿದೆ.
ಕಳೆದ ವಾರದಿಂದ ಮುಂದೂಡಲ್ಪಡಲಾಗುತ್ತಿರುವ ವಿಶ್ವಾಸಮತ ಯಾಚನೆಗೆ ಇಂದು ಫೈನಲ್ ಆಗಿ ಮುಹೂರ್ತ ಫಿಕ್ಸ್ ಆಗಿತ್ತು. ಸ್ಪೀಕರ್, ಸಿಎಂ, ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಕೂಡ ಇವತ್ತೇ ವಿಶ್ವಾಸಮತ ಯಾಚನೆ ಮಾಡೋದಕ್ಕೆ ರೆಡಿ ಅಂತಲೂ ಸದನದಲ್ಲಿ ಹೇಳಿಕೆ ನೀಡಿದ್ರು. ಇದೀಗ ಆ ಮಾತಿಗೆ ಸ್ಪೀಕರ್ ರನ್ನು ಕಟ್ಟಿಹಾಕಿರುವ ಬಿಜೆಪಿ ಹೇಗಾದ್ರೂ ಮಾಡಿ, ಎಷ್ಟೋತ್ತೇ ಆಗಲಿ ಇವತ್ತೆ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕಿ ಅಂತ ದುಂಬಾಲು ಬಿದ್ದಿದೆ. ಇನ್ನೊಂದೆಡೆ ಬಿಜೆಪಿಯ ಒತ್ತಡಕ್ಕೆ ಸಿಲುಕಿ ವಿಲವಿಲ ಒದ್ದಾಡುತ್ತಿರೋ ದೋಸ್ತಿಗಳು ಅತೃಪ್ತರ ಮೇಲೆ ಅನರ್ಹತೆ ಅಸ್ತ್ರ ಪ್ರಯೋಗಿಸಿವುದರ ಬಗ್ಗೆ ಮತ್ತೆ ವಾರ್ನಿಂಗ್ ಮಾಡಿದ್ದಾರೆ.
ವಿಧಾನಸೌಧದ ಬಳಿ ಮಾತನಾಡಿದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್, ಅತೃಪ್ತರನ್ನುದ್ದೇಶಿಸಿ ಮಾತನಾಡಿದ್ರು. ನಿಮ್ಮ ಮೇಲೆ ಬಿಜೆಪಿ ಮಂಗನ ಟೋಪಿ ಹಾಕಿದೆ. ನೀವು ಸುಮ್ಮನೆ ಯಾಮಾರಬೇಡಿ, 164 ಐಬಿ ಕಾಯ್ದೆಯ ಪ್ರಕಾರ ನೀವು ನಾಳೆ ಅನರ್ಹತೆಗೆ ಗುರಿಯಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಹೀಗಾಗಿ ಮುಂಬೈ ಹೋಟೆಲ್ ನಲ್ಲಿ ಕುಳಿತಿರುವ ಅತೃಪ್ತ ಶಾಸಕರು ದಯವಿಟ್ಟು ಇದನ್ನು ಗಮನಿಸಿ. ಇದು ನಿಮಗೆ ಎಚ್ಚರಿಕೆ ಅಲ್ಲ, ಮಾಹಿತಿ ನೀಡುತ್ತಿದ್ದೇನೆ ಎಂದರು.