ಬೆಂಗಳೂರು : ರಾಜ್ಯದಲ್ಲಿ ನಾಯಕತ್ವದ ಕುರಿತು ನಡೆಯುತ್ತಿರುವ ಕದನಕ್ಕೆ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಪೂರ್ಣ ವಿರಾಮ ಇಡುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಇದನೆಲ್ಲ ಗಮನಿಸುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್ ಮೌನಕ್ಕೆ ಶರಣಾಗಿದ್ದಾರೆ. ಆದರೆ ದಿಡೀರ್ ನಡೆದ ರಾಜಕೀಯ ಬೆಳವಣಿಗೆ ಹಿನ್ನೆಲೆ ಅವರು ದಿಲ್ಲಿಗೆ ಹಾರಿದ್ದಾರೆ. ಈ ನಡುವೆಯೇ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ನಮ್ಮಲ್ಲಿ ನಾಯಕತ್ವದ ಗೊಂದಲವಿಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿರುವ ಅವರು, ಬಿಜೆಪಿಯವರು ನಮ್ಮಲ್ಲಿನ ಐವತ್ತರಿಂದ ಅರವತ್ತು ಶಾಸಕರ ಮೇಲೆ ಕಣ್ಣಿಟ್ಟಿದ್ದಾರೆ, ಇದಕ್ಕಾಗಿ ಏಜೆಂಟರನ್ನು ಕಳಿಸುತ್ತಿದೆ ಅಂತ ನಮ್ಮ ಪಕ್ಷದ ಶಾಸಕರೇ ಬಹಿರಂಗವಾಗಿಯೇ ತಿಳಿಸಿದ್ದಾರೆ. ಆದರೆ, ನಮ್ಮಲ್ಲಿ 140ಕ್ಕೂ ಹೆಚ್ಚು ಶಾಸಕರಿದ್ದಾರೆ. ಪಕ್ಷಾಂತರ ಆಗಬೇಕಾದರೆ ಕನಿಷ್ಠ 80 ರಿಂದ 90 ಶಾಸಕರು ಸಂಖ್ಯೆ ಬೇಕು, ಅವರೆಲ್ಲ ಪಕ್ಷದಿಂದ ಹೋಗಬೇಕು. ಈಗ ಯಾರೂ ಅಷ್ಟು ಮೂರ್ಖರಿಲ್ಲ. ಈ ಹಿಂದೆ ಕೂಡ 17 ಶಾಸಕರು ಬಿಜೆಪಿಗೆ ಹೋಗಿದ್ದರು. ಈಗ ಅದೆಲ್ಲಾ ನಡೆಯುವುದಿಲ್ಲ. ವಾಸ್ತವವಾಗಿ, ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ 18-20 ಶಾಸಕರೇ ಕಾಂಗ್ರೆಸ್ ಬಾಗಿಲು ಬಡಿಯುತ್ತಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವದ ಬಗ್ಗೆ ಯಾವುದೇ ಗೊಂದಲವೇ ಇಲ್ಲ. ನಮ್ಮ ಪಕ್ಷದಲ್ಲಿ ರಾಜ್ಯ ಉಸ್ತುವಾರಿಯಾಗಿರುವ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಹಾಗೂ ಪಕ್ಷದ ಚಟುವಟಿಕೆಗಳ ಬಗ್ಗೆ ನಮ್ಮ ಶಾಸಕರ ಅಭಿಪ್ರಾಯ ಪಡೆದಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ ಅಭಿವೃದ್ದಿ ಕಾರ್ಯಗಳಿಗೆ ಕೊನೆಗೂ ಹಣ ಮುಖ್ಯಮಂತ್ರಿಗಳೇ ಹಣ ನೀಡುತ್ತಾರೆ ಎಂದು ತಿಳಿಸಿದ್ದಾರೆ. ಪ್ರಮುಖವಾಗಿ ಆಪರೇಷನ್ ಚರ್ಚೆಗಳು ಶುರುವಾಗಿವೆ. ಆದರೆ ಯಾವ ಪಕ್ಷದಲ್ಲಿ ನಿಜವಾಗಿಯೂ ಆಪರೇಷನ್ ನಡೆಯಲಿದೆ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.



