ಬೆಂಗಳೂರು: ರಾಜ್ಯಕ್ಕೆ ಆಗಮಿಸಿರುವ ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಶಾಸಕರ ಬಳಿಕ ಸಚಿವರ ಜೊತೆ ಒನ್ ಟು ಒನ್ ಸಭೆಗಳನ್ನು ನಡೆಸುತ್ತಿದ್ದಾರೆ. ಸೋಮವಾರವಷ್ಟೇ ಕೆಲ ಸಚಿವರೊಂದಿಗೆ ಮಾತುಕತೆ ನಡೆಸಿರುವ ಸುರ್ಜೇವಾಲಾ ಇಂದೂ ಸಹ ಮಂತ್ರಿಗಳ ಸಭೆ ನಡೆಸಿದ್ದಾರೆ.
ಈ ನಡುವೆಯೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಕುರಿತು ಸಚಿವ ಸತೀಶ್ ಜಾರಕಿಹೊಳಿ ಅವರು ಸುರ್ಜೇವಾಲಾ ಬಳಿ ಮಹತ್ವದ ಚರ್ಚೆ ನಡೆಸಿದ್ದಾರೆ. ಒಬ್ಬರೇ ಹಲವು ಹುದ್ದೆಗಳನ್ನು ಪಡೆದಿರುವುದರಿಂದ ಸಮಸ್ಯೆ ಜಾಸ್ತಿಯಾಗುತ್ತಿದೆ. ಆಗ ಪಕ್ಷ ಸಂಘಟನೆ ಕಡೆಗೂ ನೋಡೋಕು ಆಗುವುದಿಲ್ಲ. ಅಲ್ಲದೆ ಅವರಿಗೆ ನೀಡಲಾಗಿದ್ದ ಇಲಾಖೆಯನ್ನು ನಿಭಾಯಿಸೋಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಬದಲಾವಣೆ ನಮ್ಮ ಅಭಿಪ್ರಾಯವಾಗಿದೆ ಎಂದು ಒನ್ ಟು ಒನ್ ಚರ್ಚೆಯಲ್ಲಿ ಸುರ್ಜೇವಾಲಾರಿಗೆ ತಿಳಿಸಿದ್ದಾರೆ.
ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುತ್ತಿದೆ. ಈಗಿನಿಂದಲೇ ಪಕ್ಷ ಸಂಘಟನೆ ಆಗಬೇಕು. ತಳಮಟ್ಟದಲ್ಲಿ ಸಂಘಟನೆ ಆದರೆ ಸೀಟು ಗೆಲ್ಲಲು ಸಾಧ್ಯವಾಗುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರ ಬಳಿ, ರಾಹುಲ್ ಗಾಂಧಿಯವರಿಗೂ ಈ ಬಗ್ಗೆ ವಿವರಿಸಿದ್ದೇನೆ ಎಂದು ಸತೀಶ್ ಮೀಟಿಂಗ್‌ನಲ್ಲಿ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೂ ಇದಕ್ಕೆ ಪ್ರತಿಕ್ರಿಯಿಸಿರುವ ಸುರ್ಜೇವಾಲಾ, ನೀವು ಹೇಳಿದಂತೆ ಪಕ್ಷ ಸಂಘಟನೆ ಮಾಡುವುದು ಬಹಳ ಮುಖ್ಯ. ನಿಮ್ಮ ಅಭಿಪ್ರಾಯವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ನಾಯಕರು ಗಮನಿಸುತ್ತಾರೆ ಎಂದು ಅಭಯ ನೀಡಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ನಮ್ಮ ಇಲಾಖೆಯಿಂದ ನಾವು ಯಾವ್ಯಾವ ಇಲಾಖೆಗಳಿಗೆ ಎಷ್ಟು ಅನುದಾನ ನೀಡಿದ್ದೇವೆ ಎನ್ನುವುದನ್ನು ನಾವೇ ಹೇಳಿದ್ದೇವೆ. ನಮ್ಮ ಇಲಾಖೆಗೆ ಸಂಬಂಧಿಸಿದಂತೆ 12 ಜನ ಎಂಎಲ್‌ಎಗಳ ಸಮಸ್ಯೆಗಳ ಲಿಸ್ಟ್ ಅವರ ಬಳಿ ಇತ್ತು. ಅವುಗಳಲ್ಲಿ ಅಲ್ಮೋಸ್ಟ್ ನಾವು ಅಟೆಂಡ್ ಮಾಡಿದ್ದೇವೆ. ಇನ್ನುಳಿದಿರುವ ಎರಡ್ಮೂರು ಸಮಸ್ಯೆಗಳಿವೆ ಅವುಗಳನ್ನು ಗಮನಿಸುವುದಾಗಿ ತಿಳಿಸಿದ್ದೇನೆ. ಅದಕ್ಕಾಗಿ ಪ್ರತ್ಯೇಕ ಸಭೆಯನ್ನೂ ನಡೆಸುವುದಾಗಿ ತಿಳಿಸಿದ್ದೇನೆ ಎಂದು ಸಚಿವ ಜಾರಕಿಹೊಳಿ ಮೀಟಿಂಗ್‌ನ ಇನ್‌ಸೈಡ್ ಮಾಹಿತಿ ಹೊರ ಹಾಕಿದ್ದಾರೆ.
ಕ್ಯಾನ್ಸರ್ ಬರೋಕ್ಕಿಂತ ಮುಂಚೆ ಎಚ್ಚೆತ್ತು ಕೊಳ್ಳಬೇಕಲ್ವಾ? ಥರ್ಡ್, ಫೋರ್ಥ್ ಸ್ಟೇಜ್ ಬಂದರೆ ಕಷ್ಟ ಅಲ್ವಾ? ನಮ್ಮ ಇಲಾಖೆಯ ಬಗ್ಗೆ ಸುರ್ಜೇವಾಲಾರಿಗೆ ಹೇಳಿದ್ದೇವೆ. ಶಾಸಕರು ಆರೋಪಿಸಿದ್ದಕ್ಕೆ ನಮ್ಮನ್ನು ಕರೆಸಿದ್ದರು. ನಮ್ಮ ತಪ್ಪುಗಳನ್ನು ಹೇಳಿದಾಗಲೇ ನಮಗೆ ಅವುಗಳ ಬಗ್ಗೆ ಗೊತ್ತಾಗೋದು ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಈ ಮೂಲಕ ಪಕ್ಷದಲ್ಲಿನ ಡ್ಯಾಮೇಜ್ ಕಂಟ್ರೋಲ್‌ಗೆ ಸುರ್ಜೇವಾಲಾ ಮುಂದಾಗಿರುವುದನ್ನು ಸತೀಶ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.