ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ನಾಯಕತ್ವದ ಬದಲಾವಣೆಯಿಲ್ಲ. ಐದು ವರ್ಷ ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಖುದ್ದು ಸಿದ್ದರಾಮಯ್ಯ ಅವರೇ ಪುನರುಚ್ಚರಿಸುವ ಮೂಲಕ ಎಲ್ಲ ಚರ್ಚೆಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ನವದೆಹಲಿಯಲ್ಲಿ ಹೈಕಮಾಂಡ್ ಭೇಟಿಗೂ ಮುನ್ನ ನೀಡಿರುವ ಹೇಳಿಕೆಯು ಸಾಕಷ್ಟು ರಾಜಕೀಯ ಚರ್ಚೆಗಳಿಗೆ ಕಾರಣವಾಗಿದೆ. ಈ ನಡುವೆಯೇ ಸಿದ್ದು ಬಣದ ಆಪ್ತ ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆ ನೀಡಿದ್ದು, ಸಿಎಂ ಹೇಳಿದ ಮೇಲೆ ಮ್ಯಾಚ್ ಕ್ಲೋಸ್ ಎನ್ನುವ ಮೂಲಕ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.
ಇನ್ನೂ ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಈಗಾಗಲೇ ತಮ್ಮ ತಮ್ಮ ಕ್ಷೇತ್ರಗಳಿಗೆ ಅನುದಾನ ಹೆಚ್ಚಿಸುವಂತೆ ಎರಡೂ ಕಡೆಯ ಶಾಸಕರು ಕೇಳಿಕೊಂಡಿದ್ದಾರೆ. ಆದರೆ ಇನ್ನುಳಿದ 10 ಪರ್ಸೆಂಟ್, 20ಜನ ನಮಗೆ ನಾಯಕತ್ವ ಬೇಕು, ಬೇಡ ಎಂದು ಹೇಳಿರಬಹುದು. ಹೆಚ್ಚಿನ ಜನರು ಅಭಿವೃದ್ದಿ ಕಾರ್ಯಗಳ ಬಗ್ಗೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಹೇಳಿದ್ದಾರೆ. ಅದರ ಹೊರತಾಗಿ ನಾಯಕತ್ವ ಬದಲಾವಣೆಯ ಬಗ್ಗೆ ಸುರ್ಜೇವಾಲಾ ಅವರೂ ಕೇಳಿಲ್ಲ. ಅಲ್ಲದೆ ಯಾವ ಶಾಸಕರು ಹೇಳಿಲ್ಲ. ಕಳೆದ ಬಾರಿಯೂ ಸಿಎಂ ಆಯ್ಕೆಯ ವೇಳೆಯೂ ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿಕೆಯನ್ನು ಸತೀಶ್ ಪುನರುಚ್ಚರಿಸಿದ್ದಾರೆ.
ಅಲ್ಲದೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವಾಗ ಅವರಿಗೆ ಹೆಚ್ಚಿನ ಸಂಖ್ಯೆಯ ವೋಟಿಂಗ್ ಆಗಿದೆ. ಅದರ ಆಧಾರದ ಮೇಲೆಯೇ ಹೆಚ್ಚಿನ ಶಾಸಕರ ಬೆಂಬಲವಿದೆ ಎಂದು ಹೇಳಿರಬಹುದು. ಆದರೆ 10 ಪರ್ಸೆಂಟ್ ಜನರು ನಾಯಕತ್ವದ ಬದಲಾವಣೆಯ ಬಗ್ಗೆ ಹೇಳಿದರೆ, 90 ಪರ್ಸೆಂಟ್ ಜನರು ಸಿಎಂ ಪರವಾಗಿದ್ದಾರೆ. ಸಿದ್ದರಾಮಯ್ಯ ಅವರ ಹೇಳಿಕೆಯು ಆ 10 ಪರ್ಸೆಂಟ್ ಜನರಿಗೆ ಖಡಕ್ ಸಂದೇಶವಾಗಿದೆ ಎಂದು ತಿವಿದಿದ್ದಾರೆ.
ಮ್ಯಾಚ್ ಕ್ಲೋಸ್ ಎಂದು ಬಹಿರಂಗವಾಗಿಯೇ ಅಂಪೈರ್ ತೀರ್ಮಾನಿಸಿದ್ದಾರೆ ಎಂದು ಸತೀಶ್ ಒಂದೇ ಮಾತಿನಲ್ಲಿ ಡಿಕೆ ಬಣಕ್ಕೆ ಕೌಂಟರ್ ನೀಡಿದ್ದಾರೆ. ಇನ್ನೂ ದೇಶದಲ್ಲಿ ಎಲ್ಲಿ ನೋಡಿದರೂ ಕೂಡ ಇದೇ ಚರ್ಚೆ ಜೋರಾಗಿತ್ತು ಅದಕ್ಕೆ ಸಿದ್ದರಾಮಯ್ಯ ಅವರೇ ಇತಿಶ್ರೀ ಹಾಡಿದ್ದಾರೆ ಎಂದು ಹೇಳಿದ್ದಾರೆ. ನಾವೂ ಎಲ್ಲೇ ಹೋದರೂ ಇದರ ಬಗ್ಗೆನೇ ಕೇಳುತ್ತಿದ್ದಾರೆ. ಇದರಿಂದ ಅಭಿವೃದ್ದಿ ಕುರಿತು ಚರ್ಚೆಗಳು ನಡೆಯುತ್ತಿಲ್ಲ. ಹೀಗಾಗಿ ಒಂದು ಸ್ಪಷ್ಟ ಸಂದೇಶ ನೀಡಬೇಕೆಂದೇ ಸಿದ್ದರಾಮಯ್ಯ ಹೇಳಿದ್ದಾರೆ. ಇವತ್ತಿನಿಂದ ಈ ಚರ್ಚೆ ನಿಲ್ಲಲಿ ಎಂದು ಸಚಿವ ಸತೀಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.
ಇನ್ನೂ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಹೇಳಿಕೆ ನೀಡುತ್ತಿರುವ ಶಾಸಕರಿಗೆ ಹಾಗೂ ನಾಯಕರಿಗೆ ದೆಹಲಿಯಿಂದಲೇ ಸಿದ್ದರಾಮಯ್ಯ ಕ್ಲೀಯರ್ ಮೆಸೇಜ್ ಕಳುಹಿಸಿದ್ದಾರೆ. ಯಾವುದೇ ಕಾರಣಕ್ಕೆ ಸಿಎಂ ಚೇಂಜ್ ಆಗುವುದಿಲ್ಲ, ನಾನೇ ಐದು ವರ್ಷ ಅಧಿಕಾರ ನಡೆಸುತ್ತೇನೆ.
ಮುಂದೆಯೂ ನನ್ನ ನೇತೃತ್ವದಲ್ಲಿಯೇ ಚುನಾವಣೆ ಎಂದು ಹೈಕಮಾಂಡ್ ಸೇರಿದಂತೆ ಎಲ್ಲರಿಗೂ ತಮ್ಮ ಸಂದೇಶ ರವಾನಿಸಿದ್ದಾರೆ. ಯಾಕೆಂದರೆ ರಾಜ್ಯದಲ್ಲಿ ಒಬ್ಬರ ಬಳಿಕ ಇನ್ನೊಬ್ಬರು ಎನ್ನುವಂತೆ ಶಾಸಕರು ಪವರ್ ಶೇರಿಂಗ್ ಚರ್ಚೆ ಮಾಡುತ್ತಿದ್ದಾರೆ. ಆದರೂ ಸಹ ಹೈಕಮಾಂಡ್ ಮೌನಕ್ಕೆ ಶರಣಾಗಿತ್ತು. ಹೀಗಾಗಿ ಯಾವ ಸಮಯದಲ್ಲಿ ಯಾವ ಹೇಳಿಕೆ, ಇನ್ಯಾವ ನಿರ್ಧಾರ ಪಡೆಯಬೇಕು ಎನ್ನುವುದನ್ನು ಚೆನ್ನಾಗಿ ಅರಿತಿರುವ ಸಿದ್ದರಾಮಯ್ಯ ಈಗ ತಮ್ಮ ರಾಜಕೀಯದ ಚಾಣಾಕ್ಷ ನಡೆಯನ್ನು ಅನುಸರಿಸಿರುವುದು ಕೈ ಪಾಳಯವನ್ನೇ ದಂಗು ಬಡಿಸುವಂತೆ ಮಾಡಿದೆ.