ವಿಜಯಪುರ : ಇಷ್ಟು ದಿನಗಳ ಕಾಲ ರಾಜ್ಯದಲ್ಲಿ ಜೋರಾಗಿದ್ದ ನಾಯಕತ್ವ ಬದಲಾವಣೆಯ ವಿಚಾರಕ್ಕೆ ತಾತ್ಕಲಿಕ ಬ್ರೇಕ್ ಬಿದ್ದಂತಾಗಿದೆ. ಖುದ್ದು ಸಿಎಂ ಸಿದ್ದರಾಮಯ್ಯ, ನಾನೇ ಐದು ವರ್ಷ ಅಧಿಕಾರ ನಡೆಸುತ್ತೇನೆ ಎಂದು ಖಡಕ್ ಸಂದೇಶವನ್ನು ದೆಹಲಿ ಅಂಗಳದಿಂದಲೇ ರವಾನಿಸಿದ್ದಾರೆ. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಸೈಲೆಂಟ್ ಆಗಿದ್ದಾರೆ. ಈ ನಡುವೆಯೇ ಸಚಿವ ಸತೀಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಈ ಕುರಿತು ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವೇ 5 ವರ್ಷ ಸಿಎಂ ಆಗಿರುತ್ತೇನೆ ಅಂತ ಹೇಳಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಅಂತ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಸಿಎಂ ಹುದ್ದೆಗಾಗಿ ಇಬ್ಬರ ನಡುವೆ ಯಾವ ಮುಸುಕಿನ ಗುದ್ದಾಟದ ಪ್ರಶ್ನೆಯೇ ಬರುವುದಿಲ್ಲ. ಅಲ್ಲದೆ ಮುಖ್ಯಮಂತ್ರಿ ಹುದ್ದೆಯ ವಿಷಯವಾಗಿ ಸಿಎಂ ಹಾಗೂ ಡಿಸಿಎಂ ಅವರೇ ಕ್ಲೀಯರ್ ಆಗಿ ಹೇಳಿದ್ದಾರೆ. ಇನ್ನೂ ಅವರೇ ಹೊಂದಾಣಿಕೆ ಮಾಡಿಕೊಂಡ ಬಳಿಕ ನಾವೇನು ಹೇಳೋಕೆ ಸಾದ್ಯ. ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.
ನಮ್ಮ ಹಂತದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ವಿಚಾರ ನಡೆಯುವುದಿಲ್ಲ. ಈ ಬಗ್ಗೆ ಸಮಯ ಬಂದಾಗ ವರಿಷ್ಠರೇ ನಿರ್ಧಾರ ಮಾಡುತ್ತಾರೆ. ಒಬ್ಬರಿಗೆ ಒಂದೇ ಹುದ್ದೆ ಇರಬೇಕೆನ್ನುವ ಕುರಿತೂ ಅವರೇ ತೀರ್ಮಾನಿಸುತ್ತಾರೆ. ನನ್ನ ಇಲಾಖೆಯ ಕೆಲಸಕ್ಕಾಗಿ ಪದೇ ಪದೇ ದೆಹಲಿಗೆ ಹೋಗಬೇಕಾಗುತ್ತದೆ. ರಾಜಕಾರಣಕ್ಕೂ ಹಾಗೂ ದೆಹಲಿ ಭೇಟಿಗೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.