ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ , ಗುತ್ತಿಗೆ, ಹೊರಗುತ್ತಿಗೆ ನೌಕರರ ಬಹುತೇಕ ಬೇಡಿಕೆ ಈಡೇರಿಸಿದ್ದೇವೆ. ಶ್ರೀನಿವಾಸಾಚಾರಿ ವರದಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಿದ್ದೇವೆ ಎಂಬುದಾಗಿ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟ ಪಡಿಸಿದ ಎಲ್ಲಾ ಅಂಶಗಳು ಬರೀ ಸುಳ್ಳು ಎಂಬುದಾಗಿ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದ ಗೌರವಾಧ್ಯಕ್ಷ ಆಯನೂರು ಮಂಜುನಾಥ್ ಸ್ಪಷ್ಟ ಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಆರೋಗ್ಯ ಇಲಾಖೆ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ, ವರ್ಗಾವಣೆ ಹಾಗೂ ಇತರೆ ಬೇಡಿಕೆಗಳ ಬಗ್ಗೆ ಹೋರಾಟಕ್ಕೆ ಸ್ಪಂದಿಸಿ ಅಂದಿನ ಮುಖ್ಯ ಮಂತ್ರಿಗಳಾದಂತಹ ಬಿ ಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವರಾದಂತಹ ಬಿ.ಶ್ರೀರಾಮುಲು ಇವರು ನಿವೃತ್ತ ಐ.ಎ.ಎಸ್ ಅಧಿಕಾರಿ ಶ್ರೀನೀವಾಸಾಚಾರಿ ಹಾಗೂ ನನ್ನನ್ನೂ ಒಳಗೊಂಡಂತೆ ಆರ್ಥಿಕ ಇಲಾಖೆಯ, ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಗಳ ಪ್ರತಿನಿಧಿ ಅಥವಾ ಉಪ ಕಾರ್ಯದರ್ಶಿ ದರ್ಜೆ ಮಟ್ಟಕ್ಕಿಂತ ಕಡಿಮೆ ಇಲ್ಲದ ಅಧಿಕಾರಿ, ಆರೋಗ್ಯ ಇಲಾಖೆಯ ಎಲ್ಲಾ ವಿಭಾಗದ ಉನ್ನತ ಮಟ್ಟದ ಅಧಿಕಾರಿ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಭಿಯಾನ ನಿರ್ದೇಶಕರು ಮತ್ತು ಮುಖ್ಯ ಆಡಳಿತಾಧಿಕಾರಿಗಳು ಒಳಗೊಂಡ ಸಮಿತಿ ರಚನೆ ಮಾಡಿ ಆದೇಶ ಮಾಡಿದ್ದು ಸ್ವಾಗತಾರ್ಹ. ಈ ಸಮಿತಿಯು ತನ್ನ ವರದಿಯನ್ನು ಸರ್ಕಾರಕ್ಕೆ ದಿನಾಂಕ: 28.12.2020 ರಂದು ಸಲ್ಲಿಸಿರುತ್ತದೆ. ಅಲ್ಲಿಂದ ಇಲ್ಲಿಯ ವರೆಗೂ ಸಂಪೂರ್ಣ ವರದಿಯ ಅನುಷ್ಟಾನ ಮಾಡಿ ಆದೇಶ ಹೊರಡಿಸಲು ಕೋರಲಾಗಿದ್ದು, ಈವರೆಗೂ ಪ್ರಸ್ತಾವನೆ ಸಲ್ಲಿಸಲಾಗಿದೆ, ಸುದೀರ್ಘವಾದ ಚರ್ಚೆ ಮಾಡಲಾಗಿದೆ ಮತ್ತು ಸಭೆ ಮಾಡಲಾಗಿದೆ ಆದರೆ 1-2 ಆದೇಶಗಳು ಬಿಟ್ಟು, ಪ್ರಮುಖ ಬೇಡಿಕೆಗಳ ಬಗ್ಗೆ ಆದೇಶಗಳಾಗಿ ನೌಕರರ ಕೈಗೆ ಸೇರಿರುವುದಿಲ್ಲ ಎಂದಿದ್ದಾರೆ.
ದಿ. 24.02.2022 ರ ಮಾನ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾನ್ಯ ಆರೋಗ್ಯ ಸಚಿವರು “ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಚಾರಿ ನೇತೃತ್ವದಲ್ಲಿ ರಚಿಸಿದ ಸಮಿತಿಯ ವರದಿಯ ಸಾಧಕ ಬಾಧಕಗಳನ್ನು ಸುದೀರ್ಘವಾಗಿ ಚರ್ಚಿಸಲಾಯಿತು ಮತ್ತು ಯಥಾವತ್ತಾಗಿ ಜಾರಿಗಾಗಿ ಸಂಘದ ವತಿಯಿಂದ ಒತ್ತಾಯಿಸಲಾಗಿತ್ತು, ಅದಕ್ಕೆ ಸಚಿವರು “ಸರ್ಕಾರ ಬಧ್ದವಾಗಿದ್ದು” ಮಾನ್ಯ ಮುಖ್ಯಮಂತ್ರಿರವರ ಗಮನಕ್ಕೆ ತಂದು ಆದೇಶ ಹೊರಡಿಸುವುದಾಗಿ ತಿಳಿಸಿದ ಭರವಸೆ, ಭರವಸೆಯಾಗಿಯೇ ಉಳಿದಿದೆ ಹೊರತು ಅಧಿಕಾರಿಗಳು ಅನುಷ್ಠಾನ ಮಾಡುವ ಗೋಜಿಗೇ ಹೋಗಿರುವುದಿಲ್ಲ. ಇಂತಹ ಕಾಳಜಿ ಇಲ್ಲದ ಅಧಿಕಾರಿಗಳನ್ನು ಕೂಡಲೇ ಬದಲಾಯಿಸಲು ಆಗ್ರಹಿಸಿದ್ದಾರೆ.
ಅಧಿಕಾರಿಗಳ ವಿಫಲತೆಯೂ ಕೂಡ ಮಾನ್ಯ ಸಚಿವರ ಕಾರ್ಯನಿರ್ವಹಣೆ ಹಿಡಿದ ಕೈಗನ್ನಡಿಯಾಗಿದೆ ಅಲ್ಲವೇ?
ಸೇವಾಭದ್ರತೆ/ ಸೇವೆ ಖಾಯಂ ಮಾಡುವ ಬಗ್ಗೆ ಬೇಡಿಕೆ ಇದ್ದು, ಅಸ್ಸಾಂ ಮತ್ತು ಮಣಿಪುರ ರಾಜ್ಯಗಳಲ್ಲಿ ಸಾಧ್ಯವಿದ್ದು ನಮ್ಮ ರಾಜ್ಯದಲ್ಲಿ ಏಕೆ ಸಾಧ್ಯ ಇರುವುದಿಲ್ಲ. ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುವುದಾಗಿ ಸಚಿವರು ಹೇಳಿಕೆಯಲ್ಲಿ ತಿಳಿಸಿರುತ್ತೀರಿ ಅದರ ಪ್ರತಿಯನ್ನು ನೀಡಲು ಕೋರಿದೆ. ಸರ್ಕಾರಕ್ಕೆ ಬದ್ಧತೆ ಇದ್ದಲ್ಲಿ, ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಂಡಲ್ಲಿ ಮಾತ್ರ ಸಾಧ್ಯ ಇದೆ. ಸಮಗ್ರ ಚಿಂತನೆ ಹಾಗೂ ಮಾನವೀಯ ನೆಲೆಗಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ ಮಾನ್ಯ ಸಚಿವರು ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವರದಿಯ ಬಹುತೇಕ ಶಿಫಾರಸ್ಸುಗಳ ಈಡೇರಿಕೆಗೆ ನಿರ್ಣಯ ಕ್ಯಗೊಳ್ಳಲಾಗಿದೆ ಎಂಬ ಸಚಿವರ ಉತ್ತರ ಸುಳ್ಳಾಗಿದ್ದು. ಇಲಾಖೆ ಅಧಿಕಾರಿಗಳು ಅತ್ಯಂತ ಅಸಮರ್ಪಕವಾಗಿದ್ದು, ಇಲ್ಲಿಯವರೆಗೆ ದಿನಾಂಕ 24.02.2022ರ ಸಭಾ ನಡಾವಳಿಗಳನ್ನು ನೀಡದ ಇವರು {ಎನ.ಎಚ್.ಎಂ’ನ ಮುಖ್ಯ ಆಡಳಿತ ಅಧಿಕಾರಿಗಳಾದ (CAO-NHM) ವಂದನಾ ಭಟ್ ರವರಿಗೆ ನಾನೇ ಸ್ವತಃ ನಾಲ್ಕಾರು ಬಾರಿ ಕೇಳಿದರೂ ಲಭ್ಯವಾಗಿರುವುದಿಲ್ಲ} ಬೇಡಿಕೆಗಳ ಆದೇಶಗಳನ್ನು ಜಾರಿ ಮಾಡಿರುವುದಾಗಿ ಮಾನ್ಯ ಸಚಿವರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದ ಮಾತು. ಈ ರೀತಿಯ ಸುಳ್ಳು ಮಾಹಿತಿಯಿಂದ ಸಾರ್ವಜನಿಕರಿಗೆ ಮತ್ತು ನೌಕರರಿಗೆ ದಿಕ್ಕುತಪ್ಪಿಸುವ ಹೇಳಿಕೆ ಹೊರತು ವಾಸ್ತವಾಂಶದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಸಚಿವರು ಉಲ್ಲೇಖಿಸಿರುವ ರಜೆಗಳು ಈ ಹಿಂದಿನಿಂದಲೇ ಜಾರಿಯಲ್ಲಿದ್ದು. ನಮ್ಮ ಬೇಡಿಕೆ 10 ದಿನ ಸಾಂದರ್ಭಿಕ ರಜೆ ಹೊರತು ಪಡಿಸಿ ಬೇರೆ ಯಾವುದೇ ರಜೆ ಇಲ್ಲದೇ ಇರುವುದರಿಂದ ರಜೆಗಳನ್ನು ಹೆಚ್ಚಿಸಲು ಕೋರಲಾಗಿತ್ತು. ಆದರೆ ಸದರಿ ವಿಷಯವಾಗಿ ಮಾರ್ಪಾಡಿತ ಅಥವಾ ರಜೆಗಳನ್ನು ಹೆಚ್ಚಳ ಮಾಡಿರುವ ಯಾವುದೇ ಆದೇಶವನ್ನು ಇಲ್ಲಿಯವರೆಗೂ ಹೊರಡಿಸಲಾಗಿಲ್ಲ ಎಂದು ತಿಳಿಸಿದ್ದಾರೆ.
ವರ್ಗಾವಣೆ ವಿಷಯವಾಗಿ ಮಾನ್ಯ ಸಚಿವರು ನೀಡಿರುವ ಪ್ರತಿಕ್ರಿಯೆ ಸಭೆಯಲ್ಲಿ ಚರ್ಚಿಸಿದಅಂಶದ ತದ್ವಿರುದ್ಧವಾಗಿದೆ. ಜಿಲ್ಲಾ ಆರೋಗ್ಯ ಸಂಘದ ಮುಖೇನ “ಜಿಲ್ಲೆಯ ಒಳಗಿನ” ವರ್ಗಾವಣೆಯು ಈ ಹಿಂದೆಯೂ ಜಾರಿಯಲ್ಲಿತ್ತು. ಆದರೆ ನಮ್ಮ ಬೇಡಿಕೆ “ಜಿಲ್ಲೆಯಿಂದ ಜಿಲ್ಲೆಗೆ” ಒಂದು ಬಾರಿ ಅವಕಾಶ ನೀಡಿ ವರ್ಗಾವಣೆ ನೀಡಲು ಆದೇಶ ಹೊರಡಿಸಲು ಸಹಮತಿಸಲಾಗಿತ್ತು. ಆದರೆ ಇಲ್ಲೂ ಸಹ ಮತ್ತೊಮ್ಮೆ ಅಧಿಕಾರಿಗಳು ಮಾನ್ಯ ಸಚಿವರಿಗೆ ದಾರಿ ತಪ್ಪಿಸುತ್ತಿರುವ ಹಾಗೆ ಭಾಸವಾಗುತ್ತಿದೆ ಎಂದಿದ್ದಾರೆ.
ಕ್ಷೇಮನಿಧಿ ವಿಷಯವಾಗಿ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅದೇಶಗಳು ನೀಡದೆ. ಮಾನ್ಯ ಸಚಿವರು ಖಾತೆ ತೆರೆಯಲು ಹಣಕಾಸು ಇಲಾಖೆ ಅನುಮತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿರುತ್ತೀರಿ, ವರದಿ ಸಲ್ಲಿಸಿ ಒಂದುವರೆ ವರ್ಷ ವಾದರೂ ಇನ್ನೂ ಸಹ ಪ್ರಸ್ತಾವನೆಯಲ್ಲಿಯೇ ಇದ್ದು. ಇದು ಮೇಲ್ನೋಟಕ್ಕೆ ವಿಳಂಬ ನೀತಿಯಲ್ಲದೆ ಮತ್ತಿನ್ನೇನು? ಆದೇಶವಾಗಲು ಇನ್ನೆಷ್ಟು ದಿನಗಳು ಬೇಕು? ಇದು ಮಾನ್ಯ ಸಚಿವರ ಹಾಗೂ ಅವರ ಇಲಾಖೆಯ ಅಧಿಕಾರಿಗಳು ನಿಷ್ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದ್ದಾರೆ.
ವಿಮಾ ಯೋಜನೆ ವಿಷಯವಾಗಿ ಮಾನ್ಯ ಸಚಿವರು ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ವಿಪರ್ಯಾಸ ಎಂದರೆ, ಇಲ್ಲಿಯವರೆಗೆ ಈ ಯೋಜನೆ ಬಗ್ಗೆ ಅಧಿಕೃತ ಯಾವುದೇ ಆದೇಶವಾಗಿರುವುದಿಲ್ಲ. ಅಧಿಕಾರಿಗಳು ಸಚಿವರಿಗೆ ದಾರಿ ತಪ್ಪಿಸುತ್ತಿದ್ದಾರೆಯೇ? ಅಥವಾ ತಮ್ಮ ಮೂಲಕ ನೌಕರರನ್ನು ಗೊಂದಲದಲ್ಲಿ ಸಿಲುಕಿಸುತ್ತಿದ್ದಾರೆ ಎಂಬ ಸಂದೇಹ ಮೂಡುತ್ತಿದೆ ಎಂದಿದ್ದಾರೆ.
ಎಕ್ಸ್ಪೀರಿಯೆನ್ಸ್ (EB) ಬೋನಸ್ 2018 ರಿಂದ ಜಾರಿಯಲ್ಲಿ ಇದ್ದು ಕೇಂದ್ರ ಸರ್ಕಾರ ಈ ಮೊತ್ತವನ್ನು ನೀಡುತ್ತಿದೆ. ಹರಿಯಾಣ ರಾಜ್ಯದಲ್ಲಿ 01.01.2018 ರಿಂದ ಆರನೇ ವೇತನ ಆಯೋಗದಂತೆ ಮತ್ತು ಏಳನೇ ವೇತನ ಆಯೋಗದ ಅನುಷ್ಠಾನ ಪ್ರಗತಿಯಲ್ಲಿದೆ.
ಈ ಮಾಹಿತಿಯನ್ನು ಸರ್ಕಾರ ಇಲಾಖೆ ಹಾಗೂ ಅಭಿಯಾನ ನಿರ್ದೇಶಕರಿಗೆ ಸಲ್ಲಿಸಲಾಗಿದ್ದರೂ 15% ವೇತನ ಹೆಚ್ಚಳ ವಿಷಯವಾಗಿ ಆಮೇ ಗತಿ ವೇಗದಲ್ಲಿರುವ ರಾಜ್ಯ ಕಚೇರಿಯ ಎನ್.ಹೆಚ್ಎಮ್’ನ ಮಾನವ ಸಂಪನ್ಮೂಲ ವಿಭಾಗದ ಸಿಬ್ಬಂದಿಗಳ ಅನುಭವ ಮತ್ತು ಬದ್ಧತೆಯ ಕೊರತೆಯಿಂದ ನೌಕರರಿಗೆ ನ್ಯಾಯ ಒದಗಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಸದಾ ಆರ್ಥಿಕ ಇಲಾಖೆಯನ್ನು ದೂರುವ ಬದಲು ಸಮರ್ಪಕವಾದ ಆಡಳಿತ ನೀಡಿ ನೌಕರರಿಗೆ ಆದೇಶಗಳನ್ನು ಕಾಲಕಾಲಕ್ಕೆ ನೀಡಿದ್ದಲ್ಲಿ ಈ ರೀತಿಯ ಕಲಹದ ವಾತಾವರಣ ಉಂಟಾಗುವುದಿಲ್ಲ ಎಂದು ಹೇಳಿದ್ದಾರೆ.
ಈ ಕೆಳಗಿನ ಅಂಶಗಳ ಬಗ್ಗೆ ಮಾನ್ಯ ಸಚಿವರ ಸಭೆಯಲ್ಲಿ ಚರ್ಚಿಸಿದ್ದರು, ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಸದರಿ ವಿಫಲತೆಯೇ ನಮ್ಮ ಪ್ರತಿಪಾದನೆ ಹೊರತು ಯಾರ ಮೇಲೂ ಆರೋಪ ಮಾಡುವುದಲ್ಲ.
1. ಬೀದರ್ ಮಾದರಿ ಹೊರಗುತ್ತಿಗೆ ನೌಕರರಿಗಾಗಿ ಸಂಘ ಸ್ಥಾಪಿಸುವ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಥವಾ ರಾಜ್ಯ ಮಟ್ಟದಲ್ಲಿ “ಒಂದು ಸಂಘ ಅಥವಾ ಸಂಸ್ಥೆ ಮಾಡಿ” ಅದರ ಮೂಲಕ ನೇಮಕಾತಿ ಮತ್ತು ವೇತನ ಪಾವತಿ ಮಾಡುವ ಬಗ್ಗೆ ಪ್ರಸ್ತಾಪಿಸಿ ಜಿಲ್ಲೆಗಳಿಗೆ ಆದೇಶ ನೀಡಲು ಅಥವಾ ರಾಜ್ಯ ಮಟ್ಟದಿಂದಲೇ ಸಂಸ್ಥೆಯನ್ನು ಸ್ಥಾಪಿಸಿ ಸದರಿ ನೌಕರರ ಹಿತ ಕಾಯಲು ಸಂಘವು ವಿನಂತಿಸಿದಾಗ “ಪರಿಗಣಿಸಿ ಕ್ರಮವಹಿಸಲಾಗುವುದು” ಎಂದು ತಿಳಿಸಲಾಯಿತು. ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
2. ಒಂದು ದಿನ (1 day) ವಿರಾಮ ನೀಡುವ ಹಾಗೂ ಪ್ರತಿ ವರ್ಷ ಬಾಂಡ್ ಪದ್ಧತಿಯನ್ನು ಕೈಬಿಡಲು ಛತ್ತೀಸಘಡ ಹಾಗೂ ಹರಿಯಾಣದಲ್ಲಿ ರದ್ದು ಪಡಿಸಿದ ಹಾಗೆ ಪರಿಶೀಲಿಸಲಾಗುವುದೆಂದು ತಿಳಿಸಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲಾಯಿತು. ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
3.ಕೋವಿಡ್’ನಲ್ಲಿ ಮೃತ ಪಟ್ಟವರ (ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ) ಪರಿಹಾರ ಧನ ಬಿಡುಗಡೆ ಬಗ್ಗೆ ಸಂಘದ ವತಿಯಿಂದ ವಿವರವಾದ ಪಟ್ಟಿಯನ್ನು ಈಗಾಗಲೇ ಹಲವಾರು ಬಾರಿ ಇಲಾಖಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
4. ಮಾನವ ಸಂಪನ್ಮೂಲ ನಿರ್ವಹಣೆಗಾಗಿ HRIS ತಂತ್ರಾಂಶವನ್ನು ಎರಡು-ಮೂರು ತಿಂಗಳೊಳಗೆ ಅನುಷ್ಠಾನ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
5. ಇಡಿಗಂಟು ಸೌಲಭ್ಯ ನೀಡುವ ಬಗ್ಗೆ (ಹಣರೂಪದ ಕೊಡುಗೆ) ಚರ್ಚೆ ಮಾಡಲಾಗಿತ್ತು. ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
6. ಈ ಹಿಂದಿನ ಅವಧಿಯಲ್ಲಿ ಮೊದಲನೇ COVID’19 ಸಂದರ್ಭದಲ್ಲಿ ನಡೆದ ಮುಷ್ಕರದ 14 ದಿನಗಳ ಕಡಿತವಾದ ವೇತನ ಪಾವತಿಗಾಗಿ ಸಲ್ಲಿಕೆಯಾದ ಕಡತವನ್ನು ಪುನರ್ ಪರಿಶೀಲಿಸಿಲು ವಿನಂತಿಸಿದಾಗ. ಈ ವಿಷಯವಾಗಿ ಮಾನ್ಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಅಧಿಕಾರಿಗಳಿಗೆ “ಪುನರ್ ಪರಿಶೀಲಿಸಲು” ಸೂಚಿಸಿದ್ದರು. ಇಲ್ಲಿಯವರೆಗೆ ಕ್ರಮ ಕೈಗೊಂಡಿರುವುದಿಲ್ಲ.
ಮಾನ್ಯ ಸಚಿವರು ಸಭೆಯಲ್ಲಿ ಸಮ್ಮತಿಸಿದ ಅಂಶಗಳು ಅನುಷ್ಠಾನಗೊಳ್ಳದೆ ಇದ್ದಾಗ ನೌಕರರ ಪರವಾಗಿ ಧ್ವನಿ ಎತ್ತಿದ್ದೇನೆ ಮತ್ತು ಆರೋಗ್ಯ ಇಲಾಖೆ ಅಧೀನದ ಅಧಿಕಾರಿಗಳು ಅಸಮರ್ಪಕವಾಗಿ ಕೆಲಸ ಮಾಡಿದರೆ, ಅದು ತಮ್ಮ ವಿಫಲತೆ ಎಂಬುದನ್ನು ಎಚ್ಚರಿಸುವ ಕಾರ್ಯನಿರ್ವಹಿಸಿದ್ದೇನೆ. ಒಳ್ಳೆಯ ಕೆಲಸಗಳು ಆದಾಗ ಸ್ಪಂದನೆ ಸಿಕ್ಕಾಗ, ಮಾನ್ಯ ಸಚಿವರ ಸ್ಪಂದನೆಗೆ ಪ್ರಶಂಸಿಸಿದ್ದು ಉಂಟು. ನೌಕರರ ಬೇಡಿಕೆಗಳ ವಿಷಯದಲ್ಲಿ ಆಗುತ್ತಿರುವ ವಿಳಂಬ ಧೋರಣೆಯನ್ನು ಖಂಡಿಸಿ ಮತ್ತು ಶಾಸಕನಾಗಿ ತಮ್ಮ ಕೆಲವು ಧೋರಣೆಗಳನ್ನು ಸರಿಪಡಿಸಿಕೊಳ್ಳಲು ಟೀಕಿಸಿದ್ದೇನೆ ವಿನಹ ವ್ಯಕ್ತಿಗತವಾಗಿ ಯಾವುದೇ ಸ್ವಾರ್ಥದಿಂದಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಂಘಟನಾತ್ಮಕವಾದ ಹೋರಾಟದ ನಿಲುವನ್ನು ಮತ್ತು ನನ್ನ ಸಾರ್ವಜನಿಕ ಬದುಕಿನಲ್ಲಿನ ವಿಷಯವಾಗಿ ಗೌರವ ನೀಡಿದ್ದಕ್ಕಾಗಿ ಪ್ರೀತಿಪೂರ್ವಕವಾಗಿ ತಮಗೆ ಆಭಾರಿಯಾಗಿದ್ದೇನೆ. ವಾಸ್ತವಿಕ ನೆಲೆಗಟ್ಟಿನಲ್ಲಿ ನೌಕರರ ಬೇಡಿಕೆ ಈಡೇರದಿದ್ದಕ್ಕೆ ಮತ್ತು ಇಲಾಖೆ ಅಧೀನ ಅಧಿಕಾರಿಗಳ ವಿಳಂಬ ಧೋರಣೆ ಬಗ್ಗೆ ಗಮನ ಸೆಳೆದಿರುತ್ತೇನೆ. ಆದೇಶಗಳು ಕೈ ಸೇರಿದಾಗ ಮಾತ್ರ ಬೇಡಿಕೆಗಳು ಈಡೇರಿಸಿದಂತಾಗುತ್ತದೆ. ತಮ್ಮ ಗೌರವಕ್ಕೆ ಧಕ್ಕೆ ತರುವಂತಹ ಅಧಿಕಾರಿಗಳನ್ನು ಮುಲಾಜಿಲ್ಲದೇ ವರ್ಗಾವಣೆಗೊಳಿಸಿ ಅಥವಾ ವಜಾಗೊಳಿಸಲು ಆಗ್ರಹಿಸಿದ್ದಾರೆ.
ಕೋವಿಡ್ ನಿರ್ವಹಣೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ತಮಗೆ ಪ್ರಶಂಸೆ ಬರಲು ಈ ನೌಕರರ ಶ್ರಮದ ಕೊಡುಗೆಯೂ ಇದೆ ಎಂಬುದನ್ನು ಮರೆಯಲಾಗದು. ಕಾರಣ ಎಲ್ಲಾ ಬೇಡಿಕೆಗಳನ್ನು ಸಕಾಲದಲ್ಲಿ ಈಡೇರಿಸಿ ಆದೇಶಗಳನ್ನಾಗಿ ಹೊರಡಿಸಲು ಈ ಮೂಲಕ ತಮ್ಮಲ್ಲಿ ವಿನಂತಿ ಮಾಡುತ್ತೇನೆ. ಮುಂದುವರೆದು ಬೇಡಿಕೆಗಳನ್ನು ಈಡೇರಿಸುವಲ್ಲಿ ಮೀನಾಮೇಷ ಎಣಿಸಿ ವಿಳಂಬ ಧೋರಣೆ ಮಾಡಿದ್ದಲ್ಲಿ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹಾಗೂ ಅಧಿವೇಶನದಲ್ಲಿಯೂ ಸಹ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ಇದಕ್ಕೆ ಆಸ್ಪದ ಕೊಡದೇ ಆದೇಶಗಳನ್ನು ಹೊರಡಿಸಲು ಮತ್ತೊಮ್ಮೆ ಕೋರಿದ್ದಾರೆ.