ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಯುದ್ಧಕ್ಕೆ ಕದನ ವಿರಾಮ ಸಿಕ್ಕಿದೆ. ಆದರೆ, ಶಾಸಕರ ಅಸಮಾಧಾನಕ್ಕೆ ತುತ್ತಾಗಿರುವ ಸಚಿವರಿಗೆ ಢವಢವ ಶುರುವಾಗಿದೆ. ಯಾಕಂದ್ರೆ ಕೆಲ ಸಚಿವರ ವಿರುದ್ಧ ಶಾಸಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ದೂರು ಸಲ್ಲಿಸಿದ್ದಾರೆ.
ರಣದೀಪ್ ಸಿಂಗ್ ಸುರ್ಜೇವಾಲ ಅವರು ಚಾರ್ಜ್‌ಶೀಟ್‌ನೊಂದಿಗೆ ರಾಜ್ಯಕ್ಕೆ ಮತ್ತೆ ಭೇಟಿ ನೀಡುತ್ತಿದ್ದಾರೆ. ಶಾಸಕರ ದೂರುಗಳಿಗೆ ಸಮಜಾಯಿಷಿ ಕೇಳುವ ಭಾಗವಾಗಿ ಕೆಲವು ಸಚಿವರೊಂದಿಗೆ ಮುಖಾಮುಖಿ ಸಭೆ ನಡೆಸಲಿದ್ದಾರೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ದಿಲ್ಲಿ ಭೇಟಿ ಬಳಿಕ ನಡೆಯಲಿರುವ ಈ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಬೆಂಗಳೂರಲ್ಲಿ ಇದೇ ಜುಲೈ 15ರಂದು ಎಐಸಿಸಿ ಒಬಿಸಿ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಭಾಗವಹಿಸಲಿರುವ ಸುರ್ಜೇವಾಲ, ಇಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಮರುದಿನ ಬೆಳಗ್ಗೆ 10.30ರಿಂದ ಕೆಪಿಸಿಸಿ ಕಚೇರಿಯಲ್ಲಿ ಕೆಲವು ಸಚಿವರು ಹಾಗೂ ಲೋಕಸಭಾ ಸದಸ್ಯರೊಂದಿಗೆ ನಿರಂತರ ಸಮಾಲೋಚನೆ ನಡೆಸಲಿದ್ದಾರೆ.
ಈ ಹಿಂದೆ ಮಾಡಿದ ಸಭೆಗಳಲ್ಲಿ 60ಕ್ಕೂ ಹೆಚ್ಚು ಶಾಸಕರೊಂದಿಗೆ ಸುರ್ಜೇವಾಲ ಮುಖಾಮುಖಿ ಸಭೆ ನಡೆಸಿದ್ದರು. ಈ ವೇಳೆ ಅನೇಕ ಶಾಸಕರು, ಸಚಿವರ ವಿರುದ್ಧ ದೂರುಗಳ ಸುರಿಮಳೆಗರೆದಿದ್ದಾರೆ. ಕೆಲವು ಸಚಿವರು ತಮಗೆ ಕಿಮ್ಮತ್ತು ಕೊಡುತ್ತಿಲ್ಲ. ಮುಖ ಕೊಟ್ಟು ಮಾತನಾಡುತ್ತಿಲ್ಲ. ವರ್ಗಾವಣೆ ಸಹಿತ ಹಲವು ವಿಚಾರಗಳಲ್ಲಿ ಶಿಫಾರಸು ಪತ್ರಗಳನ್ನು ತಿರುಗಿಯೂ ನೋಡುವುದಿಲ್ಲ. ಮಧ್ಯವರ್ತಿಗಳ ಹಾವಳಿ ಅನೇಕ ಇಲಾಖೆಗಳಲ್ಲಿದ್ದು, ಇದರಿಂದ ಬೇಸರ ಬರುವಂತಾಗಿದೆ ಎಂದು ಆರೋಪಗಳನ್ನು ಆಡಳಿತ ಪಕ್ಷದ ಶಾಸಕರೇ ಮಾಡಿದ್ದರು.
ಈ ದೂರುಗಳನ್ನು ಕೆಲವರು ರಾಜ್ಯ ಉಸ್ತುವಾರಿ ಸೂಚನೆ ಮೇರೆಗೆ ಲಿಖಿತವಾಗಿಯೂ ನೀಡಿದ್ದಾರೆ. ಪೂರಕ ದಾಖಲೆಗಳನ್ನೂ ನೀಡಿದ್ದಾರೆ. ಹಿಂದಿನ ಎರಡೂ ಭೇಟಿಗೆ ಮುನ್ನ ಹಿರಿಯ ಶಾಸಕರು, ಮಾಧ್ಯಮಗಳ ಮುಂದೆಯೇ ನೇರ ಆರೋಪ ಮಾಡಿದ್ದರು. ಅಲ್ಲದೆ, ಹಣ ಕೊಟ್ಟವರಿಗೆ ಮಾತ್ರ ಮನೆ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್, ವಸತಿ ಸಚಿವರ ಆಪ್ತ ಕಾರ್ಯದರ್ಶಿಯೊಂದಿಗೆ ನಡೆಸಿದ ಆಡಿಯೋ ತುಣುಕು ಸಂಚಲನ ಮೂಡಿಸಿತ್ತು. ಇದೆಲ್ಲವೂ ಸಚಿವರೊಂದಿಗೆ ಸುರ್ಜೇವಾಲ ನಡೆಸಲಿರುವ ಮುಖಾಮುಖೀ ಸಭೆಯಲ್ಲಿ ಚರ್ಚೆಗೆ ಬರಲಿದೆ ಎನ್ನಲಾಗಿದೆ.
ಇನ್ನು 4 ದಿನಗಳ ಹಿಂದಷ್ಟೇ ದಿಲ್ಲಿಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸುರ್ಜೇವಾಲ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಕೆಪಿಸಿಸಿ ಪದಾಧಿಕಾರಿಗಳ ನೇಮಕ ಸಹಿತ ಪಕ್ಷಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದರು. ಇದಾಗಿ ವಾರದ ಅಂತರದಲ್ಲಿ ಸಚಿವರೊಂದಿಗೆ ಸುರ್ಜೇವಾಲ ಮುಖಾಮುಖಿ ಆಗಲಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ