ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಆರೋಪ ಮಾಡಲಾಗಿದೆ. ಸ್ತ್ರೀಯರ ಪ್ರವೇಶ ವಿಚಾರವಾಗಿ ಸುದ್ದಿಯಾಗಿದ್ದ ಶಬರಿಮಲೆ, ಇದೀಗ ಅವ್ಯವಹಾರದ ಕುರಿತು ಸುದ್ದಿಯಾಗಿದೆ. ದೇವಸ್ಥಾನದ ದ್ವಾರಪಾಲಕ ಮೂರ್ತಿಗಳ ಚಿನ್ನಲೇಪಿತ ಕವಚದಲ್ಲಿ, ಚಿನ್ನದ ತೂಕ ಕಡಿಮೆ ವಿಚಾರವಾಗಿ ಗಂಭೀರ ಆರೋಪ ಕೇಳಿಬಂದಿದೆ. ಬೆಂಗಳೂರಿನ ಉನ್ನಿಕೃಷ್ಣನ್ ಪೊಟ್ಟಿ ಎಂಬುವರ ಮೇಲೆ ಆರೋಪ ಮಾಡಲಾಗಿದೆ.
1998ರಲ್ಲಿ ಉದ್ಯಮಿ ವಿಜಯ್ ಮಲ್ಯ ದೇವಾಲಯದ ಗರ್ಭಗುಡಿ ಮತ್ತು ದ್ವಾರಪಾಲಕ ವಿಗ್ರಹಗಳಿಗೆ, ಚಿನ್ನದ ಲೇಪನಕ್ಕಾಗಿ 30.3 ಕೆಜಿ ಚಿನ್ನ ಮತ್ತು 1,900 ಕೆಜಿ ತಾಮ್ರ ದಾನ ಮಾಡಿದ್ದರು. ಬೆಂಗಳೂರಿನ ಉನ್ನಿಕೃಷ್ಣನ್ ಪೊಟ್ಟಿ 2019ರಲ್ಲಿ, ವಿಗ್ರಹಗಳ ಚಿನ್ನದ ಕವಚಗಳ ಮರುಲೇಪನಕ್ಕಾಗಿ ಚೆನ್ನೈಗೆ ತೆಗೆದುಕೊಂಡು ಹೋಗಿದ್ರು. ಇದಕ್ಕೆ ಶಬರಿಮಲೆ ವಿಶೇಷ ಕಮಿಷನರ್ ಅಥವಾ ಕೇರಳ ಹೈಕೋರ್ಟ್‌ನಿಂದ ಅನುಮತಿಯ್ನೂ ಪಡೆದಿರಲಿಲ್ಲ. 39 ದಿನಗಳ ಬಳಿಕ ಹಿಂದಿರುಗಿಸುವಾಗ ಸುಮಾರು 4 ಕೆಜಿ ಚಿನ್ನ ಕಡಿಮೆಯಾಗಿದೆ.
ಇತ್ತೀಚೆಗೆ ಕವಚಗಳನ್ನು ಪುನಃ ದುರಸ್ತಿಗಾಗಿ ಕಳುಹಿಸಿದಾಗಲೂ, ಕೋರ್ಟ್‌ಗೆ ಮಾಹಿತಿ ನೀಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಸದ್ಯ, ದೇವಾಲಯದ ಎಲ್ಲಾ ಆಸ್ತಿಗಳ ಸಂಪೂರ್ಣ ತನಿಖೆಗೆ, ಕೇರಳ ಹೈಕೋರ್ಟ್ ಆದೇಶಿಸಿದೆ. 1998ರಿಂದ 2025ರ ಅವಧಿಯಲ್ಲಿ ನಡೆದ ಚಿನ್ನದ ಲೇಪನದ ಕುರಿತು, ಸಮಗ್ರ ತನಿಖೆ ನಡೆಸುವಂತೆ ಕೋರಿ ಹೈಕೋರ್ಟ್‌ಗೆ ಮನವಿ ಸಲ್ಲಿಸಲು ಟಿಡಿಬಿ ಮುಂದಾಗಿದೆ.
ಈ ಪ್ರಕರಣದಲ್ಲಿ ರಾಜಕೀಯ ಸಂಘರ್ಷ ಶುರುವಾಗಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಏಕೆ ಮೌನವಾಗಿದ್ದಾರೆಂದು ವಿರೋಧ ಪಕ್ಷಗಳು ಪ್ರಶ್ನಿಸಿವೆ. ಟಿಡಿಬಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಮತ್ತು ಧಾರ್ಮಿಕ ಸಚಿವ ವಿ.ಎನ್. ವಾಸವನ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ.