ತುಮಕೂರು: ಧರ್ಮಸ್ಥಳದಲ್ಲಿ ಪತ್ತೆಯಾದ ಅಸ್ತಿ ಪಂಜರ ಪಕ್ಕದಲ್ಲಿ ತುಮಕೂರು ಜಿಲ್ಲೆಯ ಯುವಕನ ಐಡಿ ಸಿಕ್ಕಿದೆ. 12 ವರ್ಷಗಳಿಂದ ನಾಪತ್ತೆಯಾಗಿದ್ದ ಆ ಯುವಕನ ಗುರುತು ಸಿಕ್ಕಿರುವ ಸುದ್ದಿ ಕೇಳಿ ಗ್ರಾಮದವರು ಬೆಚ್ಚಿಬಿದ್ದಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಡಿ.ಕಲ್ಲಳ್ಳಿ ಗ್ರಾಮದ ಆದಿಶೇಷ ಎಂಬ ಯುವಕನ ಅಸ್ತಿ ಪಂಜರವೆಂದು ಶಂಕಿಸಲಾಗಿದೆ. ಗ್ರಾಮದಲ್ಲಿ ಬೋಜಯ್ಯ–ಚೆನ್ನಮ್ಮ ದಂಪತಿಗೆ ಪದ್ಮ, ಲಕ್ಷ್ಮಿ ಎಂಬ ಇಬ್ಬರು ಹೆಣ್ಣುಮಕ್ಕಳು ಮತ್ತು ಆದಿಶೇಷ ಎಂಬ ಒಬ್ಬ ಗಂಡುಮಗನಿದ್ದರು. ಈ ಕುಟುಂಬ ಗ್ರಾಮದಿಂದ ದೂರದ ತೋಟದ ಮನೆಯಲ್ಲಿ ವಾಸವಾಗಿತ್ತು. ಬೆಂಗಳೂರಿನ ಶೇಖರ್ ಬಾರ್ನಲ್ಲಿ ಕೆಲಸ ಮಾಡುತ್ತಿದ್ದ ಆದಿಶೇಷ, 2013ರ ಅಕ್ಟೋಬರ್ 2ರಂದು ಸ್ನೇಹಿತರೊಂದಿಗೆ ಊರಿಗೆ ಬಂದು ಹೊರಟಿದ್ದನು. ಆದರೆ ಆ ಬಳಿಕ ಅವನು ಮತ್ತೆ ಮನೆಗೆ ಮರಳಿರಲಿಲ್ಲ.
ಆ ದಿನ ತಾನು ಬಳಸುತ್ತಿದ್ದ ಫೋನ್ನ್ನು ತಾಯಿ ಚೆನ್ನಮ್ಮ ಅವರ ಬಳಿಯೇ ಇಟ್ಟು ಹೋಗಿದ್ದ. ಮಗನ ನೆನಪಿನಿಂದ ಬೇಸತ್ತ ತಂದೆ ಬೋಜಯ್ಯ 2016ರಲ್ಲಿ ಮೃತಪಟ್ಟರು. ಬಳಿಕ ಚೆನ್ನಮ್ಮ ತಮ್ಮ ಮಗಳ ಮನೆ ಸೇರಿದರು. ಮಗನ ನಾಪತ್ತೆಯ ಕುರಿತು ಗುಬ್ಬಿ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಇತ್ತೀಚೆಗೆ ಧರ್ಮಸ್ಥಳದಲ್ಲಿ ಅಸ್ತಿ ಪಂಜರ ಪತ್ತೆಯಾದ ಸ್ಥಳದಲ್ಲಿ ಆದಿಶೇಷನ ಐಡಿ ಸಿಕ್ಕಿರುವ ಬಗ್ಗೆ ಎಸ್ಐಟಿ ಕುಟುಂಬಕ್ಕೆ ಮಾಹಿತಿ ನೀಡಿದೆ. ಸ್ಥಳಕ್ಕೆ ತೆರಳಿ ಐಡಿ ಕಾರ್ಡ್ ತಮ್ಮ ತಮ್ಮ ಆದಿಶೇಷನದ್ದೇ ಎಂದು ಅಕ್ಕ ಪದ್ಮ ದೃಢಪಡಿಸಿದ್ದಾರೆ.
ಅವನು ಇನ್ನೂ ಜೀವಂತವಾಗಿದ್ದಾನೆಂದು ನನಗೆ ಅನಿಸುತ್ತಿದೆ. ಅವನಿಗೆ ಏನೂ ಆಗದೆ ಸುಖವಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅಕ್ಕ ಪದ್ಮ ಭಾವನಾತ್ಮಕವಾಗಿ ತಿಳಿಸಿದ್ದಾರೆ. ಇದೇ ಕುರಿತು ಮತ್ತೆ ದೂರು ಸಲ್ಲಿಸಲು ಎಸ್ಐಟಿ ಸಲಹೆ ನೀಡಿದ್ದು, ಇಂದು ಗುಬ್ಬಿ ಪೊಲೀಸ್ ಠಾಣೆಗೆ ತೆರಳಿ ತಮ್ಮ ತಮ್ಮನ ನಾಪತ್ತೆ ಬಗ್ಗೆ ದೂರು ದಾಖಲಿಸುವುದಾಗಿ ಕುಟುಂಬ ತಿಳಿಸಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ




