Hubli News: ಹುಬ್ಬಳ್ಳಿ: ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಕಾನೂನು ಸುವ್ಯವಸ್ಥೆ ಸುಭದ್ರವಾಗಿದೆ. ವಿನಾಕಾರಣ ಬಿಜೆಪಿಯವರು ಕುಮ್ಮಕ್ಕು ನೀಡಿ, ಹಿಂದೂ-ಮುಸ್ಲಿಂ ವಿಚಾರ ತರುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಕಾರ್ಯಗಳು ಬೇಕಾಗಿಲ್ಲ. ಕೆಲಸ ಮಾಡುವ ಸರ್ಕಾರಗಳು ಬೇಕಾಗಿಲ್ಲ. ಏನಾದರೂ ಮಾಡಿ ರಾಜ್ಯ ಸರ್ಕಾರದ ಹೆಸರನ್ನು ಕೆಡಿಸುವ ಪ್ರಯತ್ನದಲ್ಲಿದ್ದಾರೆ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುವ ಸಣ್ಣಪುಟ್ಟ ವಿಚಾರಗಳನ್ನು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ಆದರೆ ಈ ಯಾವುದಕ್ಕೂ ಆಸ್ಪದ ಕೊಡದೇ ಕಾನೂನು ಸುವ್ಯವಸ್ಥೆ ಕಾಪಾಡುತ್ತಿದೆ ಎಂದರು.
ಎಚ್.ಐ.ವಿ ಇಂಜೆಕ್ಷನ್ ಮಾಡಲು ಪ್ರಯತ್ನಿಸಿದ ಆರೋಪದಲ್ಲಿರುವ ಶಾಸಕ ಮುನಿರತ್ನ ಅವರು ಜನಪ್ರತಿನಿಧಿಗಳಾಗಿ ಮುಂದುವರೆಯಲು ಯೋಗ್ಯವಲ್ಲ. ನಾಲಾಯಕ್ ಅಯೋಗ್ಯರು. ನಾವೆಲ್ಲರೂ ತಲೆತಗ್ಗಿಸುವಂತಹ ವಿಚಾರವಾಗಿದೆ. ಪಕ್ಷದವರಿಗೆ ನೈತಿಕತೆ ಇದ್ದರೇ ಅವರನ್ನು ಕೂಡಲೇ ಹೊರಹಾಕಬೇಕು ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಹರಿಹಾಯ್ದರು.