ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿ ಬಗ್ಗೆ ಸಾಕಷ್ಟು ಊಹಾಪೋಹಗಳು ಸೃಷ್ಟಿಯಾಗಿವೆ. ಇದಕ್ಕೆ ಪುಷ್ಠಿ ಕೊಡುವಂತೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ, ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಕಾರ್ಯಕ್ರಮವೊಂದ್ರಲ್ಲಿ ಮಾತನಾಡಿರುವ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ, ನಮ್ಮ ತಂದೆ ರಾಜಕೀಯ ಕೊನೆಗಾಲದಲ್ಲಿ ಇದ್ದಾರೆ. ರಾಜಕೀಯ ಬದುಕಿನ ಕೊನೆಘಟ್ಟದಲ್ಲಿ ಇದ್ದಾರೆಂದು ಹೇಳಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ.
ಇಷ್ಟು ದಿನ ಹೋದಲ್ಲಿ ಬಂದಲ್ಲಿ, ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಎನ್ನುತ್ತಿದ್ದ ಎಂಎಲ್‌ಸಿ ಯತೀಂದ್ರ, ಇದೀಗ ಸ್ಫೋಟಕ ವಿಚಾರ ಬಾಯ್ಬಿಟ್ಟಿದ್ದಾರೆ. ಇಷ್ಟು ಮಾತ್ರವಲ್ಲ. ಸಿದ್ದರಾಮಯ್ಯ ಬಳಿಕ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆಯೂ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಪ್ರಗತಿಪರ ಸಿದ್ಧಾಂತ ಇಟ್ಟುಕೊಂಡಿರುವ ನಾಯಕರು ನಮಗೆ ಬೇಕು. ಅವರು ಮಾರ್ಗದರ್ಶನ ಮಾಡಿ ನೇತೃತ್ವ ವಹಿಸಬೇಕು. ಸತೀಶ್ ಜಾರಕಿಹೊಳಿ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಕಾಂಗ್ರೆಸ್ ಸಿದ್ಧಾಂತ ಇಟ್ಟುಕೊಂಡಿರುವವರಿಗೆ ಮಾದರಿಯಾಗಿದ್ದಾರೆ. ನಮ್ಮನ್ನು ಮುನ್ನಡೆಸುತ್ತಾರೆ ಎನ್ನುವ ನಂಬಿಕೆ ನನಗಿದೆ.
ಹಕ್ಕು ಬದ್ಧತೆ ಇರುವ ನಾಯಕ ಸಿಗುವುದು ಕಷ್ಟ. ಆ ಕೆಲಸವನ್ನು ಸತೀಶ್ ಜಾರಕಿಹೊಳಿ ಮಾಡಲಿದ್ದಾರೆ. ಹೀಗಂತ ಯತೀಂದ್ರ ಸಿದ್ದರಾಮಯ್ಯ ಬಹಿರಂಗವಾಗಿ ಸತೀಶ್ ಜಾರಕಿಹೊಳಿ ಬಗ್ಗೆ, ಈ ರೀತಿ ಮಾತನಾಡಿರೋದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.