Modi On Poland; ಪ್ರಧಾನಿ ಮೋದಿ ಪೋಲೆಂಡ್, ಉಕ್ರೇನ್ ಪ್ರವಾಸ: ‘ಐತಿಹಾಸಿಕ’ ಭೇಟಿ ಹಿಂದಿರುವ ಕಾರಣಗಳೇನು..?

ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಇಂದಿನಿಂದ ಪೋಲೆಂಡ್ (Poland) ಹಾಗೂ ಯುದ್ಧಪೀಡಿತ ಉಕ್ರೇನ್‌ (Ukraine)ಗೆ ಅಧಿಕೃತ ಪ್ರವಾಸ ಕೈಗೊಂಡಿದ್ದಾರೆ. ಪೋಲೆಂಡ್‌ಗೆ ಆಗಮಿಸಿರುವ ಪ್ರಧಾನಿ ಮೋದಿ ಆಗಸ್ಟ್ 23ರಂದು ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ. 30 ವರ್ಷಗಳ ಹಿಂದೆ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ನಂತರ ಬರೋಬ್ಬರಿ 4 ದಶಕಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್‌ಗೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ.

1979ರಲ್ಲಿ ಮೊರಾರ್ಜಿ ದೇಸಾಯಿ (Morarji Desai) ಅವರ ನಂತರ 45 ವರ್ಷಗಳಲ್ಲಿ ಯುರೋಪಿಯನ್ ದೇಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಪೋಲೆಂಡ್‌ಗೆ ಭೇಟಿ ನೀಡಿದ್ದಾರೆ. ಭಾರತ ಮತ್ತು ಪೋಲೆಂಡ್ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70 ವರ್ಷಗಳನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಪೋಲೆಂಡ್‌ಗೆ ಭೇಟಿ ನೀಡಿರುವುದು ಮಹತ್ವ ಪಡೆದುಕೊಂಡಿದೆ.

 

ಪೋಲೆಂಡ್ ಪ್ರವಾಸದ ಬಗ್ಗೆ ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನಿ ಮೋದಿ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ರಾಜತಾಂತ್ರಿಕ ಸಂಬಂಧಗಳ 70 ವರ್ಷಗಳನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ನನ್ನ ಪೋಲೆಂಡ್ ಪ್ರವಾಸ ಕೈಗೊಳ್ಳುತ್ತಿದ್ದೇನೆ. ಪೋಲೆಂಡ್ ಮಧ್ಯ ಯುರೋಪಿನ ಪ್ರಮುಖ ಆರ್ಥಿಕ ಪಾಲುದಾರ ದೇಶ ಎಂದು ಮೋದಿ ಬಣ್ಣಿಸಿದ್ದಾರೆ. ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಮುಂದುವರಿಸಲು ನನ್ನ ಸ್ನೇಹಿತ ಪ್ರಧಾನಿ ಡೊನಾಲ್ಡ್ ಟಸ್ಕ್ ಮತ್ತು ಅಧ್ಯಕ್ಷ ಆಂಡ್ರೆಜ್ ಡುಡಾ ಅವರನ್ನು ಭೇಟಿ ಮಾಡಲು ನಾನು ಎದುರು ನೋಡುತ್ತಿದ್ದೇನೆ. ಪೋಲೆಂಡ್ ನಲ್ಲಿರುವ ಅನಿವಾಸಿ ಭಾರತೀಯರ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಮೋದಿ X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ (Donald Tusk) ಮತ್ತು ಅಧ್ಯಕ್ಷ ಆಂಡ್ರೆಜ್ ಡುಡಾ (Andrez Duda) ಭೇಟಿಯಾಗಲಿರುವ ಪ್ರಧಾನಿ ಮೋದಿ ದ್ವಿಪಕ್ಷೀಯ ಸಂಬಂಧ ವೃದ್ಧಿ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಪೋಲೆಂಡ್ ರಾಜಧಾನಿ ವಾರ್ಸಾ (Warsaw)ದಲ್ಲಿ ಮೋದಿಯವರು ಅಲ್ಲಿನ ಉದ್ಯಮಿಗಳು, ಪ್ರಮುಖ ಪರಿಸರ ಶಾಸ್ತ್ರಜ್ಞರು ಹಾಗೂ ಅಲ್ಲಿ ನೆಲೆಸಿರುವ ಭಾರತೀಯರೊಂದಿಗೆ ಸಂವಾದ ನಡೆಸಲಿದ್ದಾರೆ. ಪೋಲೆಂಡ್‌ನಲ್ಲಿ ಸುಮಾರು 25 ಸಾವಿರ ಭಾರತೀಯರು ವಾಸವಿದ್ದಾರೆ ಎಂದು ಅಂದಾಜಿಸಲಾಗಿದೆ. ಇನ್ನು, 2022ರಲ್ಲಿ ಯುದ್ಧಪೀಡಿತ ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಭಾರತ ಸರ್ಕಾರ `ಆಪರೇಷನ್ ಗಂಗಾ’ (Operation Ganga) ಕಾರ್ಯಾಚರಣೆ ನಡೆಸಿದ ಸಮಯದಲ್ಲಿ ಪೋಲೆಂಡ್ ಸರ್ಕಾರ ಸಹಾಯ ಮಾಡಿತ್ತು. ಪೋಲೆಂಡ್ ಮೂಲಕ ಉಕ್ರೇನ್‌ನಲ್ಲಿ ವ್ಯಾಸಾಂಗ ಮಾಡುತ್ತಿದ್ದ 4 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಗಿತ್ತು.

ಶುಕ್ರವಾರ ಪೋಲೆಂಡ್‌ನಿಂದ ರೈಲ್ ಫೋರ್ಸ್ ಒನ್ ಟ್ರೈನ್ (rail force one train)ನಲ್ಲಿ ಉಕ್ರೇನ್ ರಾಜಧಾನಿ ಕೈವ್‌ಗೆ ಪ್ರಧಾನಿ ನರೇಂದ್ರ ಮೋದಿ ಪ್ರಯಾಣ ಬೆಳೆಸಲಿದ್ದಾರೆ. ರಷ್ಯಾದ ಪಡೆಗಳು ಉಕ್ರೇನ್ ರಾಜಧಾನಿ ಕೈವ್ ಮೇಲೆ ದಾಳಿ ನಡೆಸಿದ ಬಳಿಕ ಇದೇ ಮೊದಲ ಬಾರಿಗೆ ಮೋದಿ ಉಕ್ರೇನ್‌ಗೆ ಭೇಟಿ ನೀಡುತ್ತಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಅವರನ್ನು ಭೇಟುಯಾಗಲಿರುವ ಪ್ರಧಾನಿ ಮೋದಿ ಕೃಷಿ, ಮೂಲಸೌಕರ್ಯ, ಆರೋಗ್ಯ ಮತ್ತು ಶಿಕ್ಷಣ, ರಕ್ಷಣೆ ಮತ್ತು ಭಾರತ-ಉಕ್ರೇನ್ ದೇಶಗಳ ಬಾಂಧವ್ಯ ವೃದ್ಧಿ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಿದ್ದಾರೆ.

About The Author