ಇಂದೇ ಲೋಕಸಭಾ ಚುನಾವಣೆ ನಡೆದರೆ ಎನ್‌ಡಿಎ ಮೈತ್ರಿಕೂಟ ಮತ್ತೆ ಸ್ಪಷ್ಟ ಬಹುಮತದತ್ತ ಮುನ್ನಡೆಯಲಿದೆ. ಇಂಡಿಯಾ ಟುಡೇ – ಸಿ ವೋಟರ್ ನಡೆಸಿದ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯು ಈ ಮಾಹಿತಿಯನ್ನು ಬಹಿರಂಗಪಡಿಸಿದೆ.
ಈ ಸಮೀಕ್ಷೆಯ ಪ್ರಕಾರ, 2025ರ ಜುಲೈ 1ರಿಂದ ಆಗಸ್ಟ್ 14ರವರೆಗೆ ದೇಶಾದ್ಯಂತ ಸಮೀಕ್ಷೆ ನಡೆಸಲಾಗಿದೆ. ಸರ್ವೇ ಪ್ರಕಾರ ಎನ್‌ಡಿಎ ಮೈತ್ರಿಕೂಟ 324 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಈ ಮೂಲಕ ಎನ್‌ಡಿಎ ಮೈತ್ರಿಕೂಟವು ಕಳೆದ ಕೆಲವು ರಾಜ್ಯ ವಿಧಾನಸಭಾ ಚುನಾವಣೆಯ ಜಯಗಳಿಂದ ಪುನಃ ಬಲಶಾಲಿಯಾಗಿ ಹೊರಹೊಮ್ಮುತ್ತಿದೆ.
2024ರ ಲೋಕಸಭಾ ಚುನಾವಣೆಯಲ್ಲಿ 234 ಸ್ಥಾನಗಳೊಂದಿಗೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಶಕ್ತಿ ಪ್ರದರ್ಶನ ನೀಡಿತ್ತು. ಇದೀಗ 208 ಸ್ಥಾನಗಳಿಗೆ ಇಳಿಯುವ ನಿರೀಕ್ಷೆ ಇದೆ ಎಂದು ಸಮೀಕ್ಷೆ ಸೂಚಿಸಿದೆ.
ಈ ಸಮೀಕ್ಷೆಯಲ್ಲಿ ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಿಂದ 54,788 ಜನರನ್ನು ನೇರವಾಗಿ ಸಮೀಕ್ಷೆ ಮಾಡಲಾಗಿದೆ. ಇದಲ್ಲದೆ ಸಿ-ವೋಟರ್‌ನ ನಿಯಮಿತ ಟ್ರ್ಯಾಕರ್ ಡೇಟಾದಲ್ಲಿನ 1,52,038 ಜನರ ಅಭಿಪ್ರಾಯವನ್ನೂ ಸೇರಿಸಲಾಗಿದೆ. ಒಟ್ಟು 2,06,826 ಪ್ರತಿಕ್ರಿಯೆಗಳನ್ನು ವಿಶ್ಲೇಷಿಸಲಾಗಿದೆ. ಇದು ಈ ಸಮೀಕ್ಷೆಗೆ ಭಾರೀ ಪ್ರಮಾಣದ ಭದ್ರತೆ ನೀಡುತ್ತದೆ.
ಆದರೂ, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದಿತ್ತು. ಆದರೆ ಸರಳ ಬಹುಮತಕ್ಕೆ ಅಗತ್ಯವಿರುವ 272 ಸ್ಥಾನಗಳಿಗೆ 32 ಸ್ಥಾನಗಳ ಕೊರತೆ ಎದುರಾಗಿತ್ತು. ಆಗ ಮೈತ್ರಿಕೂಟದ ಪಕ್ಷಗಳು ಸಹಾಯಕ್ಕೆ ನಿಂತಿತ್ತು. TDP, JDU ಮತ್ತು ಇತರ ಪಾಲುದಾರರ ಬೆಂಬಲದಿಂದ ಒಟ್ಟಾರೆ 293 ಸ್ಥಾನಗಳೊಂದಿಗೆ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಮಂತ್ರಿ ಸ್ಥಾನವನ್ನು ಅಲಂಕರಿಸಿದರು.
ಈ ಸಮೀಕ್ಷೆಯ ಫಲಿತಾಂಶಗಳು ಎನ್‌ಡಿಎ ಮೈತ್ರಿಕೂಟದ ಜನಮನ್ನಣೆಯನ್ನು ಇನ್ನಷ್ಟು ಬಲಪಡಿಸುತ್ತಿದೆ. ವಿರೋಧ ಪಕ್ಷಗಳಿಗೆ ಜನಮತ ಕಳೆದುಕೊಳ್ಳುತ್ತಿರುವ ಲಕ್ಷಣವನ್ನು ಇದು ತೋರಿಸುತ್ತಿವೆ.