ಲಕ್ಷ ಕಂಠ ಗೀತಾ ಪಾರಾಯಣಕ್ಕಾಗಿ ಶ್ರೀ ಕೃಷ್ಣ ಮಠಕ್ಕೆ ಮೊದಲ ಬಾರಿಗೆ ಅಧಿಕೃತ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪೂರ್ಣಕುಂಭ ಸ್ವಾಗತ, ಮಂಗಲವಾದ್ಯಗಳ ಸಹಿತ ವೇದ ಮಂತ್ರಗಳ ಪಠನದೊಂದಿಗೆ ಬರಮಾಡಿಕೊಳ್ಳಲಾಯಿತು.
ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ಪರ್ಯಾಯ ಮಠಾಧೀಶರಾದ ಪುತ್ತಿಗೆ ಮಠದ ಶ್ರೀಗಳು ಸಂಸ್ಕೃತದಲ್ಲಿ ಮೋದಿ ಅರನ್ನು ಹಾಡಿ ಹೊಗಳಿದ್ದಾರೆ.
ಇದೇ ವೇಳೆ ಮಾತನಾಡಿದ ಪರ್ಯಾಯ ಪುತ್ತಿಗೆ ಶ್ರೀಗಳು, ಪುತ್ತಿಗೆ ಮಠದ್ದು ಇಂದ್ರ ಪರ್ಯಾಯ. ಹಾಗಾಗಿ ನರೇಂದ್ರ ಮೋದಿ ಎರಡು ಬಾರಿ ನಮ್ಮ ಪರ್ಯಾಯದ ವೇಳೆಯೇ ಮಠಕ್ಕೆ ಭೇಟಿ ನೀಡಿದ್ದಾರೆ. ಇದು ಅತ್ಯಂತ ಸಂತಸದ ವಿಚಾರ. ಈ ಎರಡು ಪರ್ಯಾಯಗಳ ನಡುವೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ ಎಂದರು.
ಅಯೋಧ್ಯೆ ರಾಮಮಂದಿರ ಕಾರ್ಯದ ಬಗ್ಗೆ ಉಲ್ಲೇಖಿಸಿದ ಸ್ವಾಮೀಜಿ, ಧರ್ಮ ರಕ್ಷಣೆಗೆ ನರೇಂದ್ರ ಮೋದಿಯವರ ಕೊಡುಗೆ ಅಪಾರ ಇದೆ ಎಂದು ಶ್ಲಾಘಿಸಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿಗೆ ‘ಭಾರತ ಭಾಗ್ಯವಿದಾತ’ ಬಿರುದು ಸಮರ್ಪಣೆ ಮಾಡಿದ್ದಾರೆ. ರಾಷ್ಟ್ರ ರಕ್ಷಾ ಕವಚ, ಶ್ರೀಕೃಷ್ಣನ ಫೋಟೋ ನೀಡಿ ಪ್ರಧಾನಿಯನ್ನ ಸನ್ಮಾನಿಸಿದ್ದಾರೆ.
ನರೇಂದ್ರ ಅಂದರೆ ಸಾಕ್ಷಾತ್ ಅರ್ಜುನ. ಈ ಅರ್ಜುನನ ಮೂಲಕ ಶ್ರೀಕೃಷ್ಣನಿಗೆ ಕೋಟಿ ಗೀತಾ ಲೇಖನ ಯಜ್ಞವನ್ನು ಸಮರ್ಪಣೆ ಮಾಡಲಾಗಿದೆ ಎಂದು ಪರ್ಯಾಯ ಶ್ರೀಗಳು ಹೇಳಿದರು.
ವರದಿ : ಲಾವಣ್ಯ ಅನಿಗೋಳ

