ಭಾರತ–ರಷ್ಯಾ ಜಂಟಿ ವೇದಿಕೆಯಲ್ಲಿ ದೊಡ್ಡ ನಿರ್ಧಾರವಾಗಿದೆ. ಪುಟಿನ್ ಸಮ್ಮುಖದಲ್ಲೇ ಪ್ರಧಾನಿ ಮೋದಿ ಪ್ರವಾಸಿಗರಿಗೆ ದೊಡ್ಡ ಗಿಫ್ಟ್ ಘೋಷಣೆ ಮಾಡಿದ್ದಾರೆ. 30 ದಿನದಲ್ಲಿ ಫ್ರೀ ಇ–ವೀಸಾ. ಯಸ್ ಭಾರತ–ರಷ್ಯಾ ದ್ವಿಪಕ್ಷೀಯ ಮಾತುಕತೆ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೆಹಲಿಯ ಹೈದರಾಬಾದ್ ಹೌಸ್ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು.
ಈ ಸಂದರ್ಭದಲ್ಲಿ ರಕ್ಷಣಾ, ವ್ಯಾಪಾರ, ಇಂಧನ ಪೂರೈಕೆ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಎರಡೂ ದೇಶಗಳು ಸಹಿ ಹಾಕಿದವು.2 ದಿನಗಳ ಭಾರತ ಪ್ರವಾಸದಲ್ಲಿರುವ ಅಧ್ಯಕ್ಷ ಪುಟಿನ್ ಜೊತೆ ಮಾತನಾಡಿದ ಪ್ರಧಾನಮಂತ್ರಿ ಮೋದಿ, ರಷ್ಯಾದ ಪ್ರವಾಸಿಗರಿಗೆ ಭಾರತವು ಉಚಿತ ಇ-ವೀಸಾ ನೀಡಲಿದೆ ಎಂದು ಮಹತ್ವದ ಘೋಷಣೆ ಮಾಡಿದರು.
ಇ-ವೀಸಾ ಪಡೆಯುವ ಪ್ರಕ್ರಿಯೆಯನ್ನು 30 ದಿನಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸದ ಅವರು, ಇ–ಟೂರಿಸ್ಟ್ ವೀಸಾ ಮತ್ತು ಗುಂಪು ಪ್ರವಾಸಿ ವೀಸಾ ಸೇವೆಗಳನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತದೆ ಎಂದರು.
ಭಾರತ ಮತ್ತು ರಷ್ಯಾ ನಡುವಿನ ಆರ್ಥಿಕ ಸಹಕಾರಕ್ಕೆ ನೂತನ ದಿಕ್ಕು ನೀಡುವಂತೆ ‘ವಿಷನ್–2030’ ದಾಖಲೆಗೆ ಸಹಿ ಹಾಕಲಾಗಿದ್ದು, ಇದರಿಂದ ವ್ಯಾಪಾರ ಸಂಬಂಧಗಳು ಮತ್ತಷ್ಟು ಬಲವಾಗಲಿವೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಆರ್ಥಿಕ ಕ್ಷೇತ್ರದಲ್ಲಿ ನಮ್ಮ ಸಹಕರವನ್ನು ವಿಸ್ತರಿಸಲು ಈ ದಾಖಲೆಗೆ ಸಹಿ ಹಾಕಿದ್ದೇವೆ. ಇಂದು ಇಬ್ಬರೂ ಸೇರಿ ಭಾರತ–ರಷ್ಯಾ ವ್ಯವಹಾರ ವೇದಿಕೆಯಲ್ಲಿ ಭಾಗಿಯಾಗುತ್ತೇವೆ.
ಇದು ನಮ್ಮ ವ್ಯವಹಾರ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ವಿಶ್ವಾಸವಿದೆ ಎಂದು ಮೋದಿ ಹೇಳಿದರು. ಜೊತೆಗೆ, ಯುರೇಷಿಯನ್ ಆರ್ಥಿಕ ಒಕ್ಕೂಟದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ (FTA) ವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಎರಡೂ ದೇಶಗಳು ಕ್ರಮಗಳನ್ನು ಕೈಗೊಂಡಿರುವುದನ್ನೂ ಅವರು ಸ್ಪಷ್ಟಪಡಿಸಿದರು. ಈ ನಿರ್ಧಾರ ರಾಜಕೀಯ ಸಂದೇಶವಾ? ಆರ್ಥಿಕ ತಂತ್ರವಾ? ಅಥವಾ ಭಾರತ–ರಷ್ಯಾ ಸಂಬಂಧಗಳ ಹೊಸ ಅಧ್ಯಾಯವಾ? ನೀವೇನಂತೀರಿ ಕಾಮೆಂಟ್ ಮಾಡಿ.
ವರದಿ : ಲಾವಣ್ಯ ಅನಿಗೋಳ

