ಮೋದಿಯ ಗಿಫ್ಟ್ ಹ್ಯಾಂಪರ್: ಪುಟಿನ್‌ಗೆ ಭಾರತೀಯ ಸ್ಪೆಷಲ್!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಎರಡು ದಿನಗಳ ಭಾರತ ಪ್ರವಾಸದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಕರಕುಶಲ, ಪರಂಪರೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಅನೇಕ ವಿಶಿಷ್ಟ ಉಡುಗೊರೆಗಳನ್ನು ಸಲ್ಲಿಸಿದ್ದಾರೆ.

ಮೋದಿಯಿಂದ ಪುಟಿನ್‌ಗೆ ನೀಡಲಾದ ಉಡುಗೊರೆಗಳಲ್ಲಿ ಅಸ್ಸಾಂ ಕಪ್ಪು ಚಹಾ, ಮುರ್ಷಿದಾಬಾದ್ ಬೆಳ್ಳಿ ಚಹಾ ಸೆಟ್, ಮಹಾರಾಷ್ಟ್ರದ ಕರಕುಶಲ ಬೆಳ್ಳಿ ಕುದುರೆ, ಆಗ್ರಾದ ಅಮೃತಶಿಲೆಯ ಚೆಸ್ ಸೆಟ್, ಪ್ರೀಮಿಯಂ ಕಾಶ್ಮೀರಿ ಕೇಸರಿ ಮತ್ತು ಭಗವದ್ಗೀತೆಯ ರಷ್ಯನ್ ಅನುವಾದಿತ ಆವೃತ್ತಿ ಪ್ರಮುಖವಾಗಿವೆ.

ಈ ಉಡುಗೊರೆಗಳು ಭಾರತದ ಸಾಂಸ್ಕೃತಿಕ ಪರಂಪರೆ, ಕರಕುಶಲ ಕೌಶಲ್ಯ ಮತ್ತು ಪ್ರಾದೇಶಿಕ ವೈವಿಧ್ಯತೆಯ ಸಮೃದ್ಧಿಯನ್ನು ಜಾಗತಿಕ ವೇದಿಕೆಯಲ್ಲಿ ಮರುದರ್ಶಿಸುತ್ತವೆ. ಬ್ರಹ್ಮಪುತ್ರದ ಬಯಲಿನಲ್ಲಿ ಬೆಳೆದ ಅಸ್ಸಾಂ ಕಪ್ಪು ಚಹಾವು ಅದರ ಉತ್ತಮ ಸುವಾಸನೆಗೆ ಹೆಸರುವಾಸಿಯಾಗಿದೆ. ಈ ಚಹಾವನ್ನು 2007ರಲ್ಲಿ ಜಿಐ ಟ್ಯಾಗ್‌ನೊಂದಿಗೆ ಗುರುತಿಸಲಾಯಿತು.

ಇದು ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ. ಮಹಾರಾಷ್ಟ್ರದ ಕರಕುಶಲ ವಸ್ತುಗಳನ್ನು ಸಹ ಪುಟಿನ್​ಗೆ ನೀಡಲಾಯಿತು. ಬೆಳ್ಳಿಯಲ್ಲಿ ಮಾಡಲಾದ ಕುಸುರಿ ಕೆತ್ತನೆಯ ಕುದುರೆಯನ್ನು ಪುಟಿನ್​ಗೆ ನೀಡಲಾಯಿತು. ಭಾರತೀಯ ಮತ್ತು ರಷ್ಯಾದ ಸಂಸ್ಕೃತಿಗಳಲ್ಲಿ ಆಚರಿಸಲಾಗುವ ಘನತೆ ಮತ್ತು ಶೌರ್ಯವನ್ನು ಸಂಕೇತಿಸುವ ಈ ಕುದುರೆ ಪರಸ್ಪರ ಗೌರವವನ್ನು ಪ್ರತಿಬಿಂಬಿಸುತ್ತದೆ.

ಸ್ಥಳೀಯವಾಗಿ ಕಾಂಗ್ ಅಥವಾ ಜಾಫ್ರಾನ್ ಎಂದು ಕರೆಯಲ್ಪಡುವ ಕಾಶ್ಮೀರಿ ಕೇಸರಿಯನ್ನು ಭಾರತದ ಪರ್ವತ ಪ್ರದೇಶದ ಎತ್ತರದ ಪ್ರದೇಶಗಳಲ್ಲಿ ಬೆಳೆಸಲಾಗುತ್ತದೆ. ಇದು ಅದರ ಉತ್ತಮ ಬಣ್ಣ, ಸುವಾಸನೆಗೆ ಹೆಸರುವಾಸಿಯಾಗಿದೆ. ಇದಕ್ಕೆ ಕೂಡ GI ಮಾನ್ಯತೆಯಿದೆ. ಇದನ್ನು “ಕೆಂಪು ಚಿನ್ನ” ಎಂದು ಕೂಡ ಕರೆಯಲಾಗುತ್ತದೆ.

ವರದಿ : ಲಾವಣ್ಯ ಅನಿಗೋಳ

About The Author